ಕರ್ನಾಟಕದಲ್ಲಿ ಗಗನಕ್ಕೇರಿದ ಟೊಮ್ಯಾಟೊ ಬೆಲೆ: ಹಲವೆಡೆ ಕೆಜಿಗೆ 120 ರೂ. ದಾಟಿದ ಬೆಲೆ..!

ಬೆಂಗಳೂರು: ಕರ್ನಾಟಕದ ಬಹುತೇಕ ಕಡೆಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೊ ಪ್ರತಿ ಕೆ.ಜಿ.ಗೆ 100-130 ರೂ.ಗಳಿಗೆ ಏರಿಕೆಯಾಗಿದೆ. ಮಳೆ ಇನ್ನಷ್ಟು ದಿನ ಮುಂದುವರಿದರೆ ತರಕಾರಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.
ಕರ್ನಾಟಕ, ತಮಿಳುನಾಡು ಹಾಗೂ ಆಂಧರಪ್ರದೇಶ ರಾಜ್ಯಗಳಲ್ಲಿ ಬೆಲೆ ಹೆಚ್ಚಾಗಿದೆ. ಅದರಲ್ಲಿಯೂ ಕರ್ನಾಟಕಕ್ಕೆ ಹೆಚ್ಚು ತರಕಾರಿ ಪೂರೈಕೆ ಮಾಡುವ ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಈ ರಾಜ್ಯಗಳಲ್ಲಿ ಟೊಮ್ಯಾಟೊ ಪ್ರತಿ ಕಿಲೋಕ್ಕೆ 100 ರೂ.ಗಿಂತ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೊಸದಾಗಿ ತರಕಾರಿ ಬೆಳೆ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ಅಗತ್ಯ ತರಕಾರಿ ಸರಬರಾಜಾಗುತ್ತಿಲ್ಲ. ಇದರಿಂದ ತರಕಾರಿ ಬೆಲೆ ಏರಿಕೆಯಾಗಿದೆ. ರೈತರು ತರಕಾರಿ ಬೆಳೆದರೂ ಹೆಚ್ಚಿನ ಪ್ರಯೋಜನವಾಗದೆ, ಬೆಳೆಯೆಲ್ಲ ಮಳೆಯಿಂದ ಹಾಳಾಗುತ್ತಿದೆ. ಇದು ಪರೋಕ್ಷವಾಗಿ ಗ್ರಾಹಕರಿಗೆ ಹೊರೆಯಾಗುತ್ತಿದೆ. ಉಳ್ಳಾಗಡ್ಡೆ ಮಳೆಯಿಂದ ತೇವಾಂಶದಿಂದ ಹಾಳಾಗುತ್ತಿದೆ.
ಇದಲ್ಲದೆ ಬೀನ್ಸ್- ಕ್ಯಾರೆಟ್ ಕೆ.ಜಿ.ಗೆ 80 ರೂ.ದಾಟಿದೆ. ಬದನೆಕಾಯಿ 80 ರೂ. ಇದೆ. ಗೋರಿಕಾಯಿ -ಸೀಮೆ ಬದನೆಕಾಯಿ-ಚಪ್ಪರದವರೆಕಾಯಿ 80 ರೂ., ಹಿರೇಕಾಯಿ-ಕುಂಬಳಕಾಯಿ 80 ರೂ., ಬೆಂಡೆಕಾಯಿ 60 ರೂ, ಈರುಳ್ಳಿ 40-50 ರೂ., ಸೌತೆಕಾಯಿ-40ರೂ., ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 30 ರೂ., ಪಾಲಕ್ 30 ರೂ., ಮೆಂತ್ಯ 20 ರೂ. ಆಗಿದೆ. 10 ರೂ.ಗಳಿಗೆ ಎರಡರಿಂದ ಮೂರು ನಿಂಬೆ ಹಣ್ಣು ಮಾರಾಟವಾಗುತ್ತಿದೆ.
ಚೆನ್ನೈಯಲ್ಲಿ ಟೊಮ್ಯಾಟೊ ತೀವ್ರ ಕೊರತೆ ಉಂಟಾಗಿದೆ. ಇಲ್ಲಿ ಈ ತಿಂಗಳ ಆರಂಭದಲ್ಲಿ ಟೊಮ್ಯಾಟೊ ಬೆಲೆ ಕಿ.ಗ್ರಾಂಗೆ 40 ರೂ. ಇದ್ದುದು ಈಗ 140 ರೂ.ಗಳಿಗೆ ಏರಿಕೆಯಾಗಿದೆ. ಇತರ ತರಕಾರಿಗಳಾದ ಕ್ಯಾಪ್ಸಿಕಂ ಹಾಗೂ ಈರುಳ್ಳಿ ಬೆಲೆ ಕೂಡ ಏರಿಕೆಯಾಗಿದೆ.
ದೇಶದಲ್ಲೇ ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ರಾಜ್ಯ ಆಂಧ್ರಪ್ರದೇಶ. ಇಲ್ಲಿ ಟೊಮ್ಯಾಟೊ ಬೆಲೆ ಪ್ರತಿ ಕೇಜಿಗೆ 100 ರೂಪಾಯಿಯನ್ನೂ ದಾಟಿದೆ. ಇಲ್ಲಿ ಅತಿ ದೊಡ್ಡ ಟೊಮ್ಯಾಟೊ ಬೆಳೆಯುವ ಪ್ರದೇಶ ಮಳೆಯಿಂದ ಹಾನಿಗೀಡಾಗಿದೆ.
ಆಂಧ್ರಪ್ರದೇಶದಲ್ಲಿ ಸಾಮಾನ್ಯವಾಗಿ 58,000 ಹೆಕ್ಟೇರ್‌ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಸಲಾಗುತ್ತದೆ. ಆಂಧ್ರ 26.67 ಲಕ್ಷ ಮೆಟ್ರಿಕ್ ಟನ್ ಟೊಮ್ಯಾಟೊ ಬೆಳೆಯುತ್ತದೆ. ಚಿತ್ತೂರಿನ ಮದನಪಲ್ಲಿ ಅತಿ ದೊಡ್ಡ ಟೊಮ್ಯಾಟೊ ಮಾರುಕಟ್ಟೆಯಾದರೂ ಈ ತಿಂಗಳು ಸುರಿದು ಮಳೆಯಿಂದ ಚಿತ್ತೂರು ಹಾಗೂ ಅನಂತಪುರ ಜಿಲ್ಲೆಯ ಟೊಮ್ಯಾಟೊ ಬೆಳೆ ನೆರೆಯಿಂದ ಹಾಳಾಗಿದೆ. ಈಗ ಹೆಚ್ಚಾಗಿ ಮಹಾರಾಷ್ಟ್ರದ ಸೋಲಾಪುರ ಹಾಗೂ ಕರ್ನಾಟಕದ ಚಿಕ್ಕಬಳ್ಳಾಪುರದಿಂದ ಟೊಮ್ಯಾಟೊ ಪೂರೈಕೆಯಾಗುತ್ತಿದೆ.

ಪ್ರಮುಖ ಸುದ್ದಿ :-   ಕೋಲಾರದಲ್ಲಿ ಕಾಂಗ್ರೆಸ್‌ ಬಣಗಳ ತಿಕ್ಕಾಟ ತಾರಕಕ್ಕೆ : ಐವರು ಶಾಸಕರಿಂದ ರಾಜೀನಾಮೆ ಬೆದರಿಕೆ; ರಾಜೀನಾಮೆ ಪತ್ರ ತೋರಿಸಿ ಎಂಎಲ್‌ ಸಿಗಳಿಂದ ಹೈಡ್ರಾಮಾ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement