1,743 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಶ್ರೀಮಂತ ರಾಜಕಾರಣಿ ಪರಿಷತ್‌ ಅಖಾಡಕ್ಕೆ..!

posted in: ರಾಜ್ಯ | 0

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬೆಂಗಳೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಕೆಜಿಎಫ್‌ ಬಾಬು’ ಎಂದೇ ಪ್ರಸಿದ್ಧಿ ಪಡೆದಿರುವ ಯೂಸೂಫ್‌ ಷರೀಫ್‌ ಅವರು ಬರೋಬ್ಬರಿ 1,743 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಜೊತೆಗೂಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿರುವ ಅವರು, ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಈವರೆಗೆ ಸ್ಪರ್ಧಿಸಿರುವ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಾಲಿ ಸಚಿವರಾಗಿರುವ ಎಂಟಿಬಿ ನಾಗರಾಜ್‌ ಅತಿ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು. 2019 ರಲ್ಲಿ ನಡೆದ ಉಪಚುನಾವಣೆಯ ವೇಳೆ ಎಂಟಿಬಿ ನಾಗರಾಜ ಅವರು 1200 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಈಗ ಈ ದಾಖಲೆಯನ್ನು ಯೂಸುಫ್‌ ಷರೀಫ್‌ ಮುರಿದಿದ್ದಾರೆ.
ಯೂಸೂಫ್‌ ಷರೀಫ್‌ ಅವರಿಗೆ ಇಬ್ಬರು ಪತ್ನಿಯರಿದ್ದು, ಐದು ಮಕ್ಕಳನ್ನು ಹೊಂದಿದ್ದಾರೆ. ತಮ್ಮ ಮೇಲೆ ಒಟ್ಟು ನಾಲ್ಕು ಪ್ರಕರಣಗಳಿವೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಸ್ತಿ ವಿವರಗಳು
ಬರೋಬ್ಬರಿ ೯೭.೦೮ ಕೋಟಿ ರೂ. ಮೌಲ್ಯದ ಚರಾಸ್ಥಿ ಹಾಗೂ 1,643.59 ಕೋಟಿ ರೂ. ಸ್ಥಿರಾಸ್ತಿ ಸೇರಿ ಒಟ್ಟು 1743 ಕೋಟಿ ರೂ.ಗಳಷ್ಟು ಆಸ್ತಿ ಹೊಂದಿರುವುದಾಗಿ ಬಾಬು ನಾಮಪತ್ರ ವೇಳೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ ಹಾಗೂ ಕೃಷಿಯೇತರ ಜಮೀನು ಹೊಂದಿರುವ ಯೂಸೂಫ್‌ ಷರೀಫ್‌ ತಮ್ಮ ಹೆಸರಿನಲ್ಲೇ 47.31 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹಾಗೂ ಪತ್ನಿಯರ ಹೆಸರಿನಲ್ಲಿ 1.30 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಅಷ್ಟೇ ಅಲ್ಲದೇ 1,593.27 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಇದೆ. ಬೆಂಗಳೂರಿನಲ್ಲಿ 3.01 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ ಹೊಂದಿದ್ದು, ಒಟ್ಟು 67.24 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2.01 ಕೋಟಿ ರು. ಮೌಲ್ಯದ ರೋಲ್ಸ್‌ ರಾಯ್ಸ್‌ ಕಾರು ಹಾಗೂ ಇಬ್ಬರು ಪತ್ನಿಯರ ಬಳಿ ತಲಾ 49 ಲಕ್ಷ ರು. ಮೌಲ್ಯದ ಎರಡು ಫಾರ್ಚೂನರ್‌ ಕಾರು ಇದೆ ಎಂದು ಹೇಳಿದ್ದಾರೆ. ತಮ್ಮ ಬಳಿ 73 ಲಕ್ಷ ರೂ. ಮೌಲ್ಯದ 1.51 ಕೆ.ಜಿ ಚಿನ್ನಾಭರಣ, ಮೊದಲ ಪತ್ನಿಯ ಬಳಿ 75.89 ಲಕ್ಷ ರೂ. ಮೌಲ್ಯದ 1.56 ಕೆ.ಜಿ. ಚಿನ್ನಾಭರಣ, ಎರಡನೇ ಪತ್ನಿ ಬಳಿ 29.19 ಲಕ್ಷ ರೂ. ಮೌಲ್ಯದ 600 ಗ್ರಾಂ. ಚಿನ್ನ, ಪುತ್ರಿ ಬಳಿ 57.40 ಲಕ್ಷ ರೂ. ಮೌಲ್ಯದ 1.18 ಕೆ.ಜಿ. ಚಿನ್ನ ಇರುವುದಾಗಿ ಉಲ್ಲೇಖಿಸಿದ್ದಾರೆ.ಬಾಂಡ್‌, ಷೇರುಗಳು, ಮ್ಯೂಚುವಲ್‌ ಫಂಡ್‌ಗಳಲ್ಲಿ ಷರೀಫ್ 17.62 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಮೊದಲ ಪತ್ನಿ 1.60 ಲಕ್ಷ ರೂ., ಎರಡನೇ ಪತ್ನಿ 75 ಸಾವಿರ ಹೂಡಿಕೆ ಮಾಡಿದ್ದಾರೆ. ಐದು ಕನ್‌ಸ್ಟ್ರಕ್ಷನ್‌ ಕಂಪನಿಗಳಲ್ಲಿ ಯೂಸೂಫ್‌ ಷರೀಫ್‌ ಒಟ್ಟು 17.61 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
ಇದಲ್ಲದೆ 4.8 ಕೆ.ಜಿ. ಚಿನ್ನಾಭರಣ ಹಾಗೂ 1.10 ಕೋಟಿ ರೂ. ಮೌಲ್ಯದ ವಾಚ್‌ ಸೇರಿದಂತೆ ದುಬಾರಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೈಯಲ್ಲಿ 19.53 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ16.87 ಕೋಟಿ ರೂ. ಠೇವಣಿ, 17.61 ಕೋಟಿ ರೂ.. ಹೂಡಿಕೆ, 58.10 ಕೋಟಿ ರೂ. ವೈಯಕ್ತಿಕ ಸಾಲ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ