ನೂಲು, ಜವಳಿ, ಬಟ್ಟೆ ಮೇಲೆ ಶೇ ೧೪೦ ಹೆಚ್ಚುವರಿ ತೆರಿಗೆ ಹೇರಿದ ಕೇಂದ್ರ ಸರ್ಕಾರ: ತಕ್ಷಣವೇ ಹಿಂಪಡೆಯಲು ವಸಂತ ಲದವಾ ಆಗ್ರಹ

posted in: ರಾಜ್ಯ | 0

ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಸರಕಾರ ಜನವರಿ ೨೦೨೨ರಿಂದ ನೂಲು, ಜವಳಿ, ನೇಯ್ದ ಬಟ್ಟೆ, ಸಿದ್ಧ ಉಡುಪು, ಕಂಬಳಿ, ಹೊದಿಕೆ, ವಸ್ತ್ರ , ಕರವಸ್ತ್ರಗಳು ಇತ್ಯಾದಿಗಳ ಮೇಲೆ ಶೇ ೧೪೦ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ತಕ್ಷಣವೇ ಹೆಚ್ಚುವರಿ ತೆರಿಗೆ ಕ್ರಮ ಕೈಬಿಡಬೇಕೆಂದು ಕಾಂಗ್ರೆಸ್‌ ಪಕ್ಷದ ವಕ್ತಾರ ವಸಂತ ಲದವಾ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ೧೮-೧೧-೨೦೨೦ರಂದು ಕೇಂದ್ರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಸಾಂಕ್ರಾಮಿಕ ಸಂಕಷ್ಟ, ಹಣದುಬ್ಬರ, ನಿರುದ್ಯೋಗ ಮತ್ತು ಬಿಜೆಪಿ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ದೇಶದ ಜನ ತತ್ತರಿಸಿರುವ ಸಂದರ್ಭದಲ್ಲಿ ಅಗಾದ ಪ್ರಮಾಣದ ತೆರಿಗೆ ಹೇರಿಕೆ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯಲ್ಲಿ ಬಿರುಗಾಳಿ ಬೀಸಿದೆ.ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಟ್ಟೆಗಳ ಮೇಲೆ ಎಂದಿಗೂ ತೆರಿಗೆ ವಿಧಿಸಿರಲಿಲ್ಲ ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೆ ಇವುಗಳ ಮೇಲೆ ತೆರಿಗೆ ಹೇರಿತು. ಈಗ ಇಂಥ ಸರಕುಗಳ ಮೇಲೆ ಶೇ ೧೪೦ರಷ್ಟು ಹೆಚ್ಚುವರಿ ತೆರಿಗೆ ಹೇರಿ ದೇಶದ ಜನಸಾಮಾನ್ಯರ ಬದುಕಿನಲ್ಲಿ ಇನ್ನಷ್ಟು ಸಂಕಷ್ಟ ಹೇರಿದಂತಾಗಿದೆ. ಕೇಂದ್ರ ಸರ್ಕಾರ ತಕ್ಷಣವೇ ಹೆಚ್ಚುವರಿ ತೆರಿಗೆ ಕ್ರಮ ಕೈಬಿಡಬೇಕು ಎಂದು ಲದವಾ ಒತ್ತಾಯಿಸಿದ್ದಾರೆ.
ಕೃಷಿ ಕ್ಷೇತ್ರದ ನಂತರ ದೇಶದಲ್ಲಿ ಅತ್ಯಂತ ಹೆಚ್ಚು ಜನ ಅವಲಂಬಿತರಾಗಿರುವುದು ಜವಳಿ ಕ್ಷೇತ್ರ. ದೇಶದ ಸುಮಾರು ೮೦ರಷ್ಟು ಉತ್ಪಾದನೆ ಸೂಕ್ಷ್ಮಮತ್ತು ಸಣ್ಣ ಉದ್ಯಿಮೆಗಳಿಂದ ಉತ್ಪಾದಿಸಲಾಗುತ್ತದೆ. ಅತ್ಯಂತ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರ ಇದಾಗಿದೆ. ಇಂತಹ ಕ್ಷೇತ್ರದ ಮೇಲೆ ಅಗಾಧ ಪ್ರಮಾಣದ ಮತ್ತು ಅವೈಜ್ಞಾನಿಕ ತೆರಿಗೆ ಹೇರಿಕೆಯಿಂದ ದೇಶದ ಜನಸಾಮಾನ್ಯರ ಬದುಕು ಇನ್ನಷ್ಟು ಸಂಕಷ್ಟಕ್ಕೀಡು ಮಾಡುತ್ತದೆ ಎಂದು ಾವರು ಸರ್ಕಾರ ತೆರಿಗೆ ಹೇರುವುದನ್ನು ಟೀಕಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೇಶದ ಜನಸಾಮಾನ್ಯರ ಮೇಲೆ ತೆರಿಗೆ, ಸುಂಕ ಹೇರುವ ರೂಢಿಯಾಗಿಬಿಟ್ಟಿದೆ. ೨೦೧೪ರಲ್ಲಿ ಕಾಂಗ್ರೆಸ್‌ ಸರ್ಕಾರ ಡೀಸೆಲ್‌ ಮೇಲೆ ಕೇವಲ ೩.೪೬ ರೂ. ಸುಂಕ ವಿಧಿಸುತ್ತಿತ್ತು. ಆದರೆ ಬಿಜೆಪಿ ಸರಕಾರ ಸುಮಾರು ೩೩ ಸುಂಕ ರೂ. ವಿಧಿಸಿದೆ. ಪೆಟ್ರೋಲ್, ಡೀಜಲ್ ಮೇಲೆ ಇತ್ತೀಚೆಗೆ ಅತ್ಯಲ್ಪ ಪ್ರಮಾಣದಲ್ಲಿ ಸುಂಕ ಇಳಿಸಿ ಬೆನ್ನು ಚೆಪ್ಪರಿಸಿಕೊಂಡಿತು. ಈಗ ಜವಳಿ ಉತ್ಪಾದನೆಗಳ ಮೇಲೆ ಶೇ ೧೪೦ರಷ್ಟು ಹೆಚ್ಚುವರಿ ತೆರಿಗೆ ಹೇರಿ ಈ ಕ್ಷೇತ್ರದ ಮೇಲೆ ಅವಲಂಬಿತ ಕೋಟ್ಯಂತರ ಜನ ಮತ್ತು ಬಳಕೆದಾರರಾಧ ಜನಸಾಮಾನ್ಯರ ಮೇಲೆ ಆರ್ಥಿಕ ಹೇರುತ್ತಿದೆ. ಜನಸಾಮಾನ್ಯರ ತಾಳ್ಮೆ ಪರೀಕ್ಷಿಸುವ ಬದಲಾಗಿ ಕೇಂದ್ರ ಸರ್ಕಾರ ಹೆಚ್ಚುವರಿ ತೆರಿಗೆ ಕ್ರಮ ಕೈ ಬಿಡಬೇಕೆಂದು ವಸಂತ ಲದವಾ ಒತ್ತಾಯಿಸಿದ್ದಾರೆ.
ಕರ್ನಾಟಕದ ಕೇಂದ್ರ ಮಂತ್ರಿಗಳು ಹಾಗೂ ಬಿಜೆಪಿ ಸಂಸದರಿಗೆ ದೇಶದ ಜನಸಾಮಾನ್ಯರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಕೂಡಲೇ ಹೆಚ್ಚುವರಿ ತೆರಿಗೆ ಹೇರಿಕೆ ಕ್ರಮ ಕೈ ಬಿಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ವಸಂತ ಲದವಾ ಆಗ್ರಹಿಸಿದ್ದಾರೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ