ಮೇಘಾಲಯದಲ್ಲಿ ಕಾಂಗ್ರೆಸ್‌ಗೆ ಆಘಾತ: ಮಾಜಿ ಸಿಎಂ ಮುಕುಲ್ ಸಂಗ್ಮಾ ಸೇರಿ 12 ಶಾಸಕರು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ..!

ನವದೆಹಲಿ: ಮೇಘಾಲಯದಲ್ಲಿ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಭಾರೀ ಆಘಾತವಾಗಿದೆ. ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 18 ಕಾಂಗ್ರೆಸ್ ಶಾಸಕರ ಪೈಕಿ 12 ಶಾಸಕರು ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಮೂಲಗಳ ಪ್ರಕಾರ, ಈ ಎಲ್ಲಾ ಶಾಸಕರು ಶಿಲ್ಲಾಂಗ್‌ನಲ್ಲಿ ಟಿಎಂಸಿ ಸೇರಿದರು. ವಿನ್ಸೆಂಟ್ ಎಚ್. ಪಾಲಾ ಅವರನ್ನು ಮೇಘಾಲಯ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದ ನಂತರ ಪಾಲಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಕುಲ್ ಎಂ ಸಂಗ್ಮಾ ನಡುವೆ ಎಲ್ಲವೂ ಸರಿಯಾಗಿರಲಿಲ್ಲ ಎನ್ನಲಾಗಿದೆ. ಪಾಲಾ ಅವರ ನೇಮಕ ಕುರಿತಂತೆ ಪಕ್ಷದ ನಾಯಕತ್ವವು ಈ ನಿಟ್ಟಿನಲ್ಲಿ ತನ್ನನ್ನು ಸಂಪರ್ಕಿಸಿಲ್ಲ ಎಂದು ಸಂಗ್ಮಾ ಹೇಳಿದ್ದರು.ಕಳೆದ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಕುಲ್ ಸಂಗ್ಮಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವಿನ್ಸೆಂಟ್ ಎಚ್ ಪಾಲಾರನ್ನು ಒಟ್ಟಿಗೆ ಭೇಟಿ ಮಾಡಿದ್ದರು. ಆದರೆ ಅದರಿಂದ ಅತೃಪ್ತಿ ಶಮನವಾಗಿರಲಿಲ್ಲ ಎನ್ನಲಾಗಿದೆ.
ಅಂದಿನಿಂದ ಸಂಗ್ಮಾ ಅವರು ಟಿಎಂಸಿ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಸಂಗ್ಮಾ ಸೇರಿದಂತೆ ಒಟ್ಟು 12 ಶಾಸಕರು ಕಾಂಗ್ರೆಸ್‌ಗೆ ದೊಡ್ಡ ಆಘಾತ ನೀಡಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಂಗ್ಮಾ ಅವರು ಕಾಂಗ್ರೆಸ್‌ನ ಉನ್ನತ ನಾಯಕತ್ವದ ಬಗ್ಗೆ ಅತೃಪ್ತರಾಗಿದ್ದರು ಎಂದು ವರದಿಯಾಗಿದೆ.
ಹೊಸ ಶಾಸಕರ ಸೇರ್ಪಡೆಯೊಂದಿಗೆ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 2023ರಲ್ಲಿ ಮೇಘಾಲಯದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಟಿಎಂಸಿಯ ಆಯ್ಕೆಗಳನ್ನು ಅನ್ವೇಷಿಸಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ತಂಡದ ಸದಸ್ಯರು ಶಿಲ್ಲಾಂಗ್‌ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement