ಕುಟುಂಬ ರಾಜಕಾರಣ ದೇಶಕ್ಕೆ ಮಾರಕ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ಕುಟುಂಬ ರಾಜಕಾರಣದ ಬಗ್ಗೆ ತೀವ್ರ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನದ ಬಗ್ಗೆ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಸಂವಿಧಾನದ ದಿನದ ಪ್ರಯುಕ್ತ ಸಂಸತ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವಕ್ಕೆ ವಿಶೇಷ ಸ್ಥಾನಮಾನವಿದೆ. ರಾಜಕೀಯ ಪಕ್ಷಗಳಿಗೆ ವಿಶೇಷ ಮಹತ್ವವೂ ಇದೆ. ಆದರೆ, ಸಂವಿಧಾನದ ಕೆಲವು ಆದರ್ಶಗಳನ್ನು ರಾಜಕೀಯ ಪಕ್ಷಗಳು ಪಾಲನೆ ಮಾಡುತ್ತಿಲ್ಲ ಎಂದು ಹೇಳಿದರು.
ಕುಟುಂಬ ರಾಜಕೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ನಮ್ಮದು ಕುಟುಂಬ ವಾದದ ಪಕ್ಷವಲ್ಲ. ಕೆಲವು ಪಕ್ಷಗಳಲ್ಲಿ ಕುಟುಂಬದಿಂದ, ಕುಟುಂಬಕ್ಕಾಗಿ ರಾಜಕೀಯ ಪಕ್ಷದ ಎಲ್ಲ ನಿರ್ಧಾರಗಳನ್ನು ಒಂದೇ ಕುಟುಂಬ ನಿರ್ಧರಿಸುತ್ತದೆ. ಸಂವಿಧಾನದಲ್ಲಿ ಕುಟುಂಬ ರಾಜಕೀಯದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿರುವುದನ್ನು ಒತ್ತಿ ಹೇಳಿದರು.
ಭ್ರಷ್ಟಾಚಾರಕ್ಕೆ ನಮ್ಮ ಸಂವಿಧಾನದಲ್ಲಿ ಶಿಕ್ಷೆ ಇದೆ. ಆದರೆ, ಕೆಲವು ರಾಜಕಾರಣಿಗಳು ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾದಾಗ ರಾಜಕೀಯ ಪಕ್ಷಗಳು ಭ್ರಷ್ಟರ ಪರ ಮಾತನಾಡುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಂವಿಧಾನದ ದಿನವನ್ನು ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ರಾಜೇಂದ್ರ ಪ್ರಸಾದ್‌ರವರಿಗೆ ಸಮರ್ಪಿಸಬೇಕಾಗಿದೆ. ಅಂಬೇಡ್ಕರ್ ನಮಗೆ ಸಂವಿಧಾನದ ಉಡುಗೊರೆ ನೀಡಿದ್ದಾರೆ ಎಂದು ಹೇಳಿದರು.
ಸಂವಿಧಾನ ಚಿಕ್ಕ ಚಿಕ್ಕ ರಾಜ್ಯಗಳನ್ನು ಒಂದಾಗಿ ಮಾಡಿ ಭಾರತವನ್ನು ನಿರ್ಮಿಸಿತು. ನಮ್ಮ ಮುಂದಿನ ತಲೆಮಾರು ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನ ದೇಶವನ್ನು ಹೇಗೆ ಒಂದುಗೂಡಿಸಿತು ಎಂಬುದನ್ನು ಅರಿಯಬೇಕು ಎಂದು ಪ್ರಧಾನಿ ಹೇಳಿದರು.
ಸಂವಿಧಾನದ ದಿನದ ಆಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿರುವ ಪ್ರತಿಪಕ್ಷಗಳ ವರ್ತನೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಕಿಡಿಕಾರಿದ್ದಾರೆ. ಸಂವಿಧಾನ ದಿನಾಚರಣೆ ಕಾರ್ಯಕ್ರಮ ಇದು ಪಕ್ಷದ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳು ಪಾಲ್ಗೊಂಡು ಗೌರವ ಸೂಚಿಸುವುದು ಎಲ್ಲರ ಕರ್ತವ್ಯವಾಗಬೇಕು. ಆದರೆ, ಈ ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಪಕ್ಷಗಳು ಸಂವಿಧಾನಕ್ಕೆ ಅಗೌರವ ಸೂಚಿಸಿದೆ ಎಂದು ಟೀಕಿಸಿದರು.
ಇಂದು ದುಃಖದ ದಿನವೂ ಆಗಿದೆ. ಏಕೆಂದರೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭಯೋತ್ಪಾದಕರು ವಿಧ್ವಂಸಕ ಕೃತ್ಯ ನಡೆಸಿದ ದಿನವೂ ಆಗಿದೆ ಎಂದು ಹೇಳಿದ ಅವರು ಈ ಸಂದರ್ಭದಲ್ಲಿ ಉಗ್ರರ ಪೈಶಾಚಿಕ ದಾಳಿಗೆ ಅಸು ನೀಗಿದ ಅಮಾಯಕರು ಹಾಗೂ ಹುತಾತ್ಮರಾದ ಯೋಧರ ಆತ್ಮಕ್ಕೆ ಮೋದಿ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದರು.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಾತನಾಡಿ, ಭಾರತದ ಸಂವಿಧಾನವು ನಮಗೆ ಭಗವದ್ಗೀತೆಯ ಆಧುನಿಕ ಆವೃತ್ತಿಯಂತಿದೆ. ಇದು ದೇಶಕ್ಕಾಗಿ ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದರು.
ಪ್ರತಿಯೊಬ್ಬರು ದೇಶಕ್ಕಾಗಿ ಕೆಲಸ ಮಾಡಲು ಬದ್ಧರಾದಾಗ ಮಾತ್ರ ’ಏಕ ಭಾರತ ಶ್ರೇಷ್ಠ ಭಾರತ’ವನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement