ತಂಬಾಕು ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ: ವಿದ್ಯಾರ್ಥಿಗಳೇ ದುಶ್ಚಟಕ್ಕೆ ಬಲಿಯಾಗಬೇಡಿ-ಡಾ. ಅಜಿತ ಪ್ರಸಾದ

ಧಾರವಾಡ: ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ದುಶ್ಟಟಕ್ಕೆ ಬಲಿಯಾಗಿ ತಮ್ಮ ಜೀವನವನ್ನೆ ಹಾಳುಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಯುವಕರು ನಾನಾ ವಿಧಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದು, ಇದರಿಂದ ತಲೆ, ಕಣ್ಣು, ಬಾಯಿ, ಕಿವಿ, ಉದರ ಹಾಗೂ ಶ್ವಾಸಕೋಶದ ರೋಗಗಳಿಂದ ಯುವಕರು ಚಿಕ್ಕ ವಯಸ್ಸಿನಲ್ಲೆ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು.
ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಆರ್ಥಿಕ ಸಂಶೋಧನಾ ಕೇಂದ್ರದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಪೀಠ ಮತ್ತು ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆರ್.ಎಸ್ ಹುಕ್ಕೇರಿಕರ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ತಂಬಾಕು ದುಷ್ಪರಿಣಾಮಗಳ ಬಗ್ಗೆ ವಿಶೇಷ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಡಿ ವೀರೇಂದ್ರ ಹೆಗ್ಗಡೆಯವರ ೭೩ನೇ ಜನ್ಮದಿನದ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಂಬಾಕು ಹಾಗೂ ಪಾನ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರಯತ್ನ ಬಹು ದೊಡ್ಡದು. ಪ್ರತಿಯೊಬ್ಬ ವಿದ್ಯಾರ್ಥಿಯು ರಾಯಭಾರಿಯಾಗಿ ಕೆಲಸ ಮಾಡಿ ದುಶ್ಟಟಕ್ಕೆ ಬಲಿಯಾದವರನ್ನು ಸರಿಯಾದ ದಾರಿಯಲ್ಲಿ ಜೀವನ ನಡೆಸುವಂತೆ ಪ್ರೇರೇಪಿಸಬೇಕು. ಆಗ ಮಾತ್ರ ಅವರ ಪ್ರಯತ್ನಕ್ಕೆ ಬೇಗನೆ ಫಲ ಸಿಗುತ್ತದೆ ಎಂದು ಹೇಳಿದರು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಧಾರವಾಡದ ತಂಬಾಕು ನಿಯಂತ್ರಣ ಕಾರ್ಯಕ್ರಮ ಸಲಹೆಗಾರ ಎಂ. ಐ. ಕಲ್ಲಪ್ಪನವರವರು ಮಾತನಾಡಿ, ಯುವಕರು ಜೈವಿಕ, ಮಾನಸಿಕ ಹಾಗೂ ಸಾಮಾಜಿಕ ಪ್ರಭಾವಗಳಿಂದಾಗಿ ತಂಬಾಕಿನಂತಹ ದುಶ್ಚಟಗಳಿಗೆ ಬಲಿಯಾಗುತ್ತಾರೆ. ಆದ್ದರಿಂದ ಪಾಲಕರು ಕೂಡ ತಮ್ಮ ಮಕ್ಕಳ ಬಗ್ಗೆ ಜಾಗರೂಕರಾಗಿಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐ.ಇ.ಆರ್ ಸಂಸ್ಥೆಯ ನಿರ್ದೇಶಕಿ ಡಾ. ಜ್ಯೋತಿ ಹಳ್ಳದ, ಜಂಟೀ ನಿರ್ದೇಶಕರಾದ ಡಾ. ಶಿವಪ್ರಸಾದ್ ಹಾಗೂ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಶಾನುಭಾಗ ಉಪಸ್ಥಿತರಿದ್ದರು. ಸುಮಾರು ೨೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ