ಕೋವಿಡ್‌ ಹೊಸ ರೂಪಾಂತರಿ ಓಮಿಕ್ರಾನ್‌’ ತಡೆಗೆ ಕಟ್ಟೆಚ್ಚರ, ವಿದೇಶಿ ಪ್ರಯಾಣಿಕರ ಮೇಲೆ ತೀವ್ರ ನಿಗಾ, ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ತೆರವು ಮರುಚಿಂತನೆ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ, ಅತ್ಯಂತ ಅಪಾಯಕಾರಿ ಎನ್ನಲಾದ ಕೋವಿಡ್‌ ಹೊಸ ರೂಪಾಂತರಿ ‘ಓಮಿಕ್ರಾನ್‌’ ಈಗ ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಈ ತಳಿಯ ವೈರಸ್‌ ಪತ್ತೆಯಾಗಿಲ್ಲವಾದರೂ, ಇದು ಭಾರತಕ್ಕೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮೊದಲನೇ ಮತ್ತು ಎರಡನೇ ಅಲೆಯಿಂದ ಕಲಿತ ಪಾಠಗಳನ್ನು ಬಳಸಿ ಮೂರನೇ ಅಲೆ ತಡೆಗೆ ಕಾರ್ಯತಂತ್ರ ರೂಪಿಸುತ್ತಿವೆ. ಹೊಸ ರೂಪಾಂತರಿ ಪತ್ತೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹೊಸ ರೂಪಾಂತರಿ ‘ಓಮಿಕ್ರಾನ್‌’ ಬಗ್ಗೆ ಅಧಿಕಾರಿಗಳು ಪ್ರಧಾನಿ ಅವರಿಗೆ ವಿವರಿಸಿದ್ದಾರೆ. ಬಳಿಕ ಪ್ರಧಾನಿ ಅವರು ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೋಂಕು ತಡೆಯಲು ಸೂಚಿಸಿದರು.
ಪ್ರಧಾನಿ ಸೂಚನೆ ಬೆನ್ನಲ್ಲೇ ಎಲ್ಲಾ ರಾಜ್ಯಗಳೂ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್‌ ಘೋಷಿಸಿವೆ. ಅದರಲ್ಲೂ ದಕ್ಷಿಣ ಆಫ್ರಿಕಾ ಮತ್ತು ಸುತ್ತಮುತ್ತಲ ದೇಶಗಳಿಂದ ಬಂದವರ ಮೇಲೆ ಹೆಚ್ಚು ನಿಗಾ ಇರಿಸಲು ಸೂಚಿಸಲಾಗಿದೆ. ದೈನಂದಿನ ಪರೀಕ್ಷೆ, ಕಾಂಟ್ರಾಕ್ಟ್ ಟ್ರೇಸಿಂಗ್‌ ಮತ್ತು ಜಿನೋಮ್‌ ಸೀಕ್ವೆನ್ಸಿಂಗ್‌ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಂಡಿವೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಗೊಳಿಸುವ ಯೋಜನೆ ಮುಂದೂಡಬೇಕು. ಸೋಂಕು ಕಾಣಿಸಿಕೊಂಡಿರುವ ದೇಶಗಳಿಂದ ಬಂದವರ ಮೇಲೆ ಹೆಚ್ಚು ನಿಗಾ ಇರಿಸಬೇಕು. ವಿದೇಶಗಳಿಂದ ಬಂದವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಜಿನೋಮ್‌ ಸೀಕ್ವೆನ್ಸ್‌ಗೆ ಒಳಪಡಿಸಬೇಕು. ಹೆಚ್ಚು ಸೋಂಕು ಇರುವೆಡೆ ಕಂಟೈನ್‌ಮೆಂಟ್‌ ಮತ್ತು ನಿಗಾ ಚಟುವಟಿಕೆ ತೀವ್ರಗೊಳಿಸಬೇಕು ಹಾಗೂ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳ ಜತೆ ನಿಕಟವಾಗಿ ಕಾರ್ಯನಿರ್ವಹಿಸಬೇಕು ಅವರು ಸೂಚನೆಗಳನ್ನು ನೀಡಿದ್ದಾರೆ.

ಪ್ರಮುಖ ಸುದ್ದಿ :-   ಜನಾಂಗೀಯ ಕಾಮೆಂಟ್‌ ವಿವಾದದ ಬೆನ್ನಲ್ಲೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್‌ ಪಿತ್ರೋಡಾ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement