ಜನಾಂಗೀಯ ಕಾಮೆಂಟ್‌ ವಿವಾದದ ಬೆನ್ನಲ್ಲೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್‌ ಪಿತ್ರೋಡಾ

ನವದೆಹಲಿ : ಲೋಕಸಭೆ ಚುನಾವಣೆ ವೇಳೆ ತಮ್ಮ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಕಾಂಗ್ರೆಸ್ಸಿನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್‌ ಪಕ್ಷದ ಸಂವಹನ ಉಸ್ತುವಾರಿ ಜೈರಾಮ ರಮೇಶ ಅವರು ಈ ಬಗ್ಗೆ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ” ಸ್ಯಾಮ್ ಪಿತ್ರೋಡಾ ಅವರು ತಮ್ಮ ಸ್ವಂತ ಇಚ್ಛೆಯಿಂದ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಅವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ” ಎಂದು ಪೋಸ್ಟ್‌ನಲ್ಲಿ ಜೈರಾಮ ರಮೇಶ ಅವರು ತಿಳಿಸಿದ್ದಾರೆ.

ಸ್ಯಾಮ್‌ ಪಿತ್ರೋಡಾ ಅವರು ದಿ ಸ್ಟೇಟ್ಸ್‌ಮನ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಭಾರತವನ್ನು “ವೈವಿಧ್ಯಮಯ ದೇಶ” ಎಂದು ಹೇಳಿದ್ದರು. ಅಲ್ಲದೆ, ಭಾರತದ ಪೂರ್ವದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಹುಶಃ ಬಿಳಿಯರಂತೆ ಮತ್ತು ದಕ್ಷಿಣದ ಜನರು ಆಫ್ರಿಕಾದವರಂತೆ ಕಾಣುತ್ತಾರೆ ಎಂದು ಹೇಳಿದ್ದರು. ಭಾರತದಲ್ಲಿ ಎಷ್ಟೆಲ್ಲ ವೈವಿಧ್ಯತೆಗಳಿದ್ದರೂ ಭಾರತವು ಪ್ರಜಾಪ್ರಭುತ್ವದಡಿ ಒಟ್ಟಾಗಿ ಸಾಗುತ್ತಿದೆ ಎಂದು ವಿವರಿಸುವ ಭರಾಟೆಯಲ್ಲಿ ಈ ತರಹದ ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. ಹಾಗೂ ಇದು ಕಾಂಗ್ರೆಸ್‌ ಮುಜುಗರಕ್ಕೂ ಕಾರಣವಾಗಿದೆ. ಏಳು ಹಂತಗಳ ಚುನಾವಣೆಯ ನಡುವೆ ಅವರು ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

ಪಿತ್ರೋಡಾ ಅವರ ಹೇಳಿಕೆಯನ್ನು ಜನಾಂಗೀಯ ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು, ಕಾಂಗ್ರೆಸ್ ಒಡೆದು ಆಳುವ ಅಭ್ಯಾಸಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಶಿವಸೇನೆ ಉದ್ಧವ್‌ ಠಾಕ್ರೆ ಬಣ ಸಹ ಈ ಹೇಳಿಕೆಗೆ ಆಕ್ಷೇಪಿಸಿದೆ. ಸ್ಯಾಮ್‌ ಪಿತ್ರೋಡಾ ಅವರು ಮಾತುಗಳು ವಿವಾದವಾಗುವ ಲಕ್ಷಣ ಕಂಡ ಬೆನ್ನಲ್ಲಿಯೇ ಕಾಂಗ್ರೆಸ್‌ ಈ ಹೇಳಿಕೆಗೂ ತಮಗೂ ಸಂಬಂಧವಿಲ್ಲ ಎಂದು ತಿಳಿಸಿದೆ. ಅವರ ಹೇಳಿಕೆಯನ್ನು ಕಾಂಗ್ರೆಸ್‌ ಒಪ್ಪುವುದಿಲ್ಲ ಎಂದು ಹೇಳಿದೆ.

“ಭಾರತದ ವೈವಿಧ್ಯತೆಯನ್ನು ವಿವರಿಸಲು ಸ್ಯಾಮ್ ಪಿತ್ರೋಡಾ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದು ಅತ್ಯಂತ ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇದರಿಂದ ಸಂಪೂರ್ಣವಾಗಿ ದೂರವಿರುತ್ತದೆ” ಎಂದು ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದಾರೆ.
ಪಿತ್ರೋಡಾ ಅವರು ಈ ಹಿಂದೆ ಹೇಳಿದ್ದ ಉತ್ತರಾಧಿಕಾರ ತೆರಿಗೆ ವಿಚಾರ ಕೂಡ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಇದು ತಣ್ಣಗಾದ ಬೆನ್ನಲ್ಲೇ ಈಗ ಅವರು ದೇಶದ ವೈವಿಧ್ಯತೆ ಬಗ್ಗೆ ವಿವರಿಸುವಾಗ ಅವರು ನೀಡಿದ ಹೋಲಿಕೆ ಮತ್ತೆ ವಿವಾದ ಸೃಷ್ಟಿಸಿದೆ.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement