ನಾಳೆ ಕರ್ನಾಟಕ ವಿದ್ಯಾವರ್ಧಕ ಸಂಘದ  ತ್ರೈ ವಾರ್ಷಿಕ ಚುನಾವಣೆ :  ಸಂಘ ನಡೆದು ಬಂದ ದಾರಿ-ಒಂದು ಅವಲೋಕನ

(ದಿನಾಂಕ ೨೮-೧೧-೨೦೨೧ ರಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇದರ ತ್ರೈ ವಾರ್ಷಿಕ ಚುನಾವಣೆ ನಡೆಲಿದ್ದು, ಆ ನಿಮತ್ತ ಲೇಖನ)

 

ಕನ್ನಡವನ್ನು ಮಂತ್ರದಂತೆ ಜಪಿಸುತ್ತ ಬಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ೧೮೯೦ ಜುಲೈ ೨೦ ರಂದು ಧಾರವಾಡದಲ್ಲಿ ಸ್ಥಾಪನೆಯಾಗಿದೆ. ೧೩೧ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಸಂಸ್ಥೆ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಚನಾತ್ಮಕ ಕರ‍್ಯಗಳನ್ನು ಮಾಡುತ್ತಾ, ಕನ್ನಡ ನಾಡು-ನುಡಿ, ಸಂಸ್ಕೃತಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಮುನ್ನೆಡೆಯುತ್ತಿದೆ.
ಕನ್ನಡದಲ್ಲಿ ಮೊದಲ ಎಂ.ಎ. ಪದವೀಧರ ಎಂಬ ಕೀರ್ತಿ ಪಾತ್ರರಾದ ರಾ.ಹ. ದೇಶಪಾಂಡೆ ಪ್ರಸಿದ್ಧ ವಕೀಲರಾಗಿದ್ದ ಶ್ಯಾಮರಾವ ವಿಠ್ಠಲ ಕೈಕಿನಿ, ಹೊಸಗನ್ನಡ ಗದ್ಯ ಪ್ರವರ್ತಕರೆಂದೇ ಖ್ಯಾತರಾದ ವೆಂಕಟ ರಂಗೋ ಕಟ್ಟಿ, ರಾವ್ ಬಹಾದೂರ ಗುರುಸಿದ್ದಪ್ಪ ಗಿಲಗಂಚಿ, ರಾವ್‌ ಸಾಹೇಬ ಶ್ರೀನಿವಾಸರಾವ ರೊದ್ದ, ರಾಮರಾವ್ ದೇಸಾಯಿ, ಶಾಂತವೀರಪ್ಪ ಮೆಣಸಿನಕಾಯಿ, ರಾ.ರಾ. ಶೇಷಗಿರಿರಾವ್ ಕೊಪ್ಪೀಕರ, ರಾ.ರಾ. ಗುರುಚಾರ್ಯ ಮೊರಬ, ರಾ.ರಾ. ಧೋಂಡೋ ನರಸಿಂಹ ಮುಳಬಾಗಿಲ ಮುಂತಾದವರು ಸಂಘವನ್ನು ಬೆಳೆಸಲು ನಿರಂತರ ಪ್ರಯತ್ನಿಸುತ್ತಾ ಬಂದಿದ್ದಾರೆ.
ಆಡಳಿತದಲ್ಲಿ ಕನ್ನಡ ಅನುಷ್ಠಾನ ಮತ್ತು ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕಾಗಿ ೧೯೮೦ರಲ್ಲಿ ನಾಲ್ಕು ತಿಂಗಳ ಕಾಲ ನಡೆದ ಐತಿಹಾಸಿಕ ಗೋಕಾಕ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘ, ಆಕಾಶವಾಣಿ ಕೇಂದ್ರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಹೋರಾಟ ಮಾಡುತ್ತಲೇ ಬಂದಿದೆ. ಗ್ರಂಥ ಕರ್ತರ, ಗ್ರಂಥಪಾಲರ ಹೊರನಾಡ ಕನ್ನಡಿಗರ ಸಮ್ಮೇಳನಗಳನ್ನು ಏರ್ಪಡಿಸುತ್ತಾ ಬಂದಿದೆ.
ಸಂಘ ೭೫೦೦ಕ್ಕೂ ಹೆಚ್ಚಿನ ಕ್ರೀಯಾಶೀಲ ಸದಸ್ಯರನ್ನು ಹೊಂದಿದ್ದು. ಈ ವರೆಗೆ ೯೧ಕ್ಕೂ ಹೆಚ್ಚಿನ ಗ್ರಂಥಗಳನ್ನು ಪ್ರಕಟಿಸಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಪ್ರಬಂಧ, ವಿಮರ್ಶೆ, ಕರ‍್ಯ ಇತಿಹಾಸ, ಕಾದಂಬರಿ, ನಾಟಕ, ಕೃಷಿ ಮುಂತಾದ ಕೃತಿಗಳಿಗೆ ಬಹುಮಾನಗಳನ್ನು ನೀಡಿವೆಯಲ್ಲದೇ, ಸಾಹಿತಿಗಳನ್ನು, ಕಲಾವಿದರನ್ನು ಮುಂತಾದವರನ್ನು ಗೌರವಿಸಿ, ಸನ್ಮಾನಿಸಿ ಪ್ರೋತ್ಸಾಹಿಸುತ್ತ ಬಂದಿದೆ. ೯೦ಕ್ಕೂ ಹೆಚ್ಚಿನ ದತ್ತಿಗಳು ಸಂಘದಲ್ಲಿ ಇದ್ದು. ಸಾಹಿತ್ಯ, ಶಿಕ್ಷಣ, ಕಾನೂನು, ವಿಜ್ಞಾನ, ಜಾನಪದ ಕಲಾ, ಯುವಜನ, ಮಹಿಳಾ, ಮಕ್ಕಳ ಮಂಟಪಗಳ ಮೂಲಕ ತನ್ನ ಕರ‍್ಯವ್ಯಾಪ್ತಿಯನ್ನು ವಿಸ್ತರಿಸುತ್ತಾ ಜನಸಾಮಾನ್ಯರಲ್ಲಿ ಉಪನ್ಯಾಸ, ನಾಟಕ, ಚರ್ಚೆ, ವಿಮರ್ಶೆ, ಗೋಷ್ಟಿ ಮುಂತಾದ ಕರ‍್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸುತ್ತಿದೆ.
ನೂತನ ಪದಾಧಿಕಾರಿಗಳು ಸಂಘವನ್ನು ಕೆಳಗಿನಂತೆ ಮುನ್ನಡೆಸಬೇಕು.
• ಕರ್ನಾಟಕ ವಿದ್ಯಾವರ್ಧಕ ಸಂಘ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಿಸಬೇಕು.
• ಸಂಘದ ಗ್ರಂಥಾಲಯವನ್ನು ಸುಸಜ್ಜಿತ ಗೊಳಿಸಬೇಕು ಮತ್ತು ಆಧುನೀಕರಣ ಗೊಳಿಸಬೇಕು.
• ಕನ್ನಡ ನಾಡು-ನುಡಿ ರಕ್ಷಣೆ ಮಾಡುತ್ತಿರುವವರನ್ನು ಪ್ರೋತ್ಸಾಹಿಸಿ ಗೌರವಿಸಬೇಕು.
• ಕನ್ನಡ ನಾಡು-ನುಡಿ ಅಭಿವೃದ್ಧಿಯ ಮತ್ತು ಸಮಾಜಕ್ಕೆ ಉಪಯುಕ್ತವಾಗುವ ಗ್ರಂಥಗಳನ್ನು ಕಡಿಮೆ ಬೆಲೆಯಲ್ಲಿ ಮುದ್ರಿಸಿ, ಓದುಗರಿಗೆ ತಲುಪಿಸಬೇಕು.
• ಕನ್ನಡ ಶಿಕ್ಷಕರ ನೇಮಕಾತಿ, ಇತರ ರಾಜ್ಯಗಳಲ್ಲಿ ಇರುವಂತೆ ರಾಜ್ಯದಲ್ಲಿ ಜಾರಿಯಾಗುವಂತೆ ಕಾರ್ಯ ನಿರ್ವಹಿಸಬೇಕು.
• ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕಲ್ಲದೆ, ಆ ಮೂಲಕ ಬಂದ ಹಣವನ್ನು ಠೇವಣಿಯಾಗಿರಿಸಿ, ರಚನಾತ್ಮಕ ಕಾರ್ಯಗಳನ್ನು ಆಯೋಜಿಸಬೇಕು.
• ಉದಯೋನ್ಮುಖ ಬರಹಗಾರರಿಗೆ ಕಮ್ಮಟಗಳನ್ನು ಸಂಘಟಿಸಬೇಕು.
• ಸಾಮಾಜಿಕ ಜಾಲ-ತಾಣಗಳಲ್ಲಿ ಕನ್ನಡ ಬಳಕೆ ಹೆಚ್ಚುತ್ತಿದ್ದು, ಅದರ ಪ್ರಯೋಜನ ಎಲ್ಲರಿಗೂ ಉಪಯುಕ್ತವಾಗುವಂತೆ ಯೋಜನೆಗಳನ್ನು ಸಿದ್ಧಪಡಿಸಬೇಕು.
• ವಾಗ್ಭೂಷಣ ಪತ್ರಿಕೆಯನ್ನು ಪುನರಾಂಭಿಸಬೇಕು.
• ಕನ್ನಡ ನಾಡು-ನುಡಿ ಬೆಳವಣಿಗೆಗೆ ಹೋರಾಡಿದ ಪುಣ್ಯ ಪುರುಷರ ಮತ್ತು ಸಂಸ್ಥೆಗಳ ಕುರಿತು ಗ್ರಂಥಗಳನ್ನು ಪ್ರಕಟಿಸಬೇಕು.
• ರಾಜ್ಯ, ದೇಶ, ಅಂತರಾಷ್ಟ್ರೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ದಾನದ ನೆರವನ್ನು ಪಡೆದು ಆ ಮೂಲಕ ಸಂಘದ ಆರ್ಥಿಕ ಸ್ಥಿತಿಗತಿಯನ್ನು ಭದ್ರಗೊಳಿಸಬೇಕು.
ಕನ್ನಡದ “ಶಕ್ತಿ ಕೇಂದ್ರ”, “ಕನ್ನಡದ ಗುಡಿ” ಎಂಬ ಭಾವನೆಗಳನ್ನು ಸಾರ್ವಜನಿಕರಲ್ಲಿ ಸಂಘ ಮೂಡಿಸುತ್ತಿದೆ. ಕನ್ನಡ ನಾಡು ನುಡಿಯ ರಕ್ಷಕರೆಂದೇ ಖ್ಯಾತರಾಗಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ೧೯೬೭ರಿಂದ ೨೦೨೦ರವರೆಗೆ ಸಂಘದ ಅಧ್ಯಕ್ಷರಾಗಿ ಕರ‍್ಯನಿರ್ವಹಿಸಿದ್ದು ಒಂದು ದಾಖಲೆ. ಅವರ ಸೇವಾ ಅವಧಿಯಲ್ಲಿ ಸಂಘ ದಾಖಲೆಯ ಕಾರ‍್ಯಗಳನ್ನು ಮಾಡಿದೆ. ಸರಕಾರ, ಸಾಹಿತಿಗಳ, ದಾನಿಗಳ ಮುಂತಾದವರ ಪತ್ರ ವ್ಯವಹಾರ ದಾಖಲೆಗಳು ಸಂಘದ ಇನ್ನೊಂದು ವೈಶಿಷ್ಟ್ಯವೆಂದರೆ ೧೩ಕ್ಕೂ ಹೆಚ್ಚಿನ ಕನ್ನಡ ಸೇವಾ ಮನೋಭಾವದ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
೨೦೦೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ೨೦೦೬ರಂದು “ಕರ್ನಾಟಕ ಏಕೀಕರಣ” ಪ್ರಶಸ್ತಿಗಳನ್ನು ಪಡೆದುಕೊಂಡಿರು ಕರ್ನಾಟಕ ವಿದ್ಯಾವರ್ಧಕ ಸಂಘ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ನವಕರ್ನಾಟಕ ನಿರ್ಮಾಣದತ್ತ ಮುನ್ನಡೆಯಲಿ.
-ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement