ನವದೆಹಲಿ : ದೇಶದಲ್ಲಿ ಕಾನೂನು ಬದ್ಧವಾಗಿ ಬಿಟ್ ಕಾಯಿನ್ ಸ್ವೀಕರಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಂಸತ್ ಅಧಿವೇಶನ ವೇಳೆ ಲೋಕಸಭೆಯಲ್ಲಿ ಸುಮಲತಾ ಅಂಬರೀಶ ಹಾಗೂ, ಡಿ.ಕೆ. ಸುರೇಶ್ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.
ಬಿಟ್‌ಕಾಯಿನ್‌ಗೆ ಯಾವುದೇ ಕಾನೂನುಬದ್ಧ ಮಾನ್ಯತೆ ನೀಡಲಾಗಿಲ್ಲ. ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ದತ್ತಾಂಶ ಸಂಗ್ರಹಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಸದ್ದಿಲ್ಲದೇ ಬಿಟ್ ಕಾಯಿನ್ ವ್ಯಾಪ್ತಿ ಹೆಚ್ಚುತ್ತಿದೆ, ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರ ನೀಡಿರುವ ಅವರು, ಭಾರತದಲ್ಲಿ ಬಿಟ್‌ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರವು ಯಾವುದೇ ಡೇಟಾ ಸಂಗ್ರಹಿಸುವುದಿಲ್ಲ ಎಂದು ಹೇಳಿದ್ದಾರೆ
ಕೆಲವು ಮಾಹಿತಿಗಳ ಪ್ರಕಾರ, ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರು ಭಾರತದಲ್ಲಿದ್ದಾರೆ. ಈ ಸಂಖ್ಯೆ 10 ಕೋಟಿಗೂ ಅಧಿಕವಾಗಿದೆ. ಭಾರತದ ಬಳಿಕ ಅಮೆರಿಕದಲ್ಲಿ ಅತಿ ಹೆಚ್ಚು ಮಂದಿ ಹೂಡಿಕೆ ಮಾಡಿದ್ದು ಈ ಸಂಖ್ಯೆ 2.74 ಕೋಟಿಯಾಗಿದೆ. ರಷ್ಯಾ 1.74 ಕೋಟಿ ಮತ್ತು ನೈಜೀರಿಯಾ 1.30 ಕೋಟಿಯೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ‘ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021’ ಮಂಡಿಸಲು ಸಿದ್ಧತೆ ನಡೆಸಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ದೇಶದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿ ನಿಷೇಧಿಸಲು ಮಸೂದೆ ಮೂಲಕ ಚಿಂತನೆ ನಡೆದಿದೆ. ಆದಾಗ್ಯೂ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ಅನುಮತಿಸುತ್ತದೆ ಎಂದು ಲೋಕಸಭೆಯ ವೆಬ್‌ಸೈಟ್ ಬುಲೆಟಿನ್ ಉಲ್ಲೇಖಿಸಿದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾಗುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ರಚಿಸಲು ಪ್ರಯತ್ನಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ