ಪೇಜಾವರ ಶ್ರೀ ಕುರಿತ ಹೇಳಿಕೆ: ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ

posted in: ರಾಜ್ಯ | 0

ಬೆಂಗಳೂರು: ಉಡುಪಿಯಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ಬಗ್ಗೆ ಆಕ್ಷೇಪಾರ್ಹವಾದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಅಲ್ಲದೇ, ಬಸವನಗುಡಿ ಠಾಣೆ, ಡಾ.ಮುರಳೀಧರ ಮತ್ತು ಎಸ್ ಎನ್ ಅರವಿಂದ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ.
ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್, ತನಿಖೆ ಮತ್ತು 37ನೇ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹಂಸಲೇಖ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರ ಪರ ವಕೀಲ ಸಿ. ಎಸ್. ದ್ವಾರಕನಾಥ್ ಅವರು “ಹಂಸಲೇಖ ವಿರುದ್ಧ ಒಂದೇ ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಇದು ಕಾನೂನುಬಾಹಿರ ಕ್ರಮ” ಎಂದರು.
ದೂರಿನಲ್ಲಿ ಹೇಳಿರುವಂತೆ ಅರ್ಜಿದಾರರು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಎರಡು ವರ್ಗಗಳ ನಡುವೆ ದ್ವೇಷ ಬಿತ್ತುವ, ಸಮಾಜದಲ್ಲಿ ಶಾಂತಿ ಕೆಡಿಸುವ, ಅವಹೇಳನಕಾರಿ ಹೇಳಿಕೆ ನೀಡುವ ಕೃತ್ಯ ಎಸಗಿಲ್ಲ. ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಗುರುತರವಾದ ಅಪರಾಧ ಕೃತ್ಯಗಳಿಲ್ಲ. ಅದನ್ನು ಪರಿಶೀಲಿಸದೆ ಎಫ್‌ಐಆರ್ ದಾಖಲಿಸಲಾಗಿದೆ. ಹಾಗಾಗಿ, ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿದರೆ ಅವರ ಜೀವನ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ತನಿಖೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಬೇಕು” ಎಂದು ಕೋರಿದರು.
ಮೈಸೂರಿನಲ್ಲಿ ನವೆಂಬರ್‌ 13ರಂದು ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಂಸಲೇಖ ಅವರು ಪೇಜಾವರಶ್ರೀ ಮತ್ತು ಬಿಳಿಗಿರಿ ರಂಗನಾಥನ ಕುರಿತು ಮಾತನಾಡಿದ್ದು ವಿವಾದವಾಗಿತ್ತು. ಈ ಸಂಬಂಧ ಡಾ. ಮುರಳೀಧರ ಮತ್ತು ಎಸ್ ಎನ್ ಅರವಿಂದ ಎಂಬವರು ನೀಡಿದ ದೂರು ಮೇರೆಗೆ ಬಸವನಗುಡಿ ಠಾಣೆ ಪೊಲೀಸರು ಹಂಸಲೇಖ ವಿರುದ್ಧ ನವೆಂಬರ್‌ 17ರಂದು ಎರಡು ಎಫ್‌ಐಆರ್ ದಾಖಲಿಸಿದ್ದರು. ಜತೆಗೆ, ನವೆಂಬರ್‌ 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ನವೆಂಬರ್‌ 25ರಂದು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ಹಂಸಲೇಖ ಹೇಳಿಕೆ ದಾಖಲಿಸಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ