ಬೆಂಗಳೂರು: ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ವೈರಾಣುವಿಗೆ ಏಕರೂಪ ಚಿಕಿತ್ಸೆ ನೀಡಲು ಮಾರ್ಗಸೂಚಿ ರೂಪಿಸಲು ಡಾ. ರವಿ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.
ಇಂದು (ಮಂಗಳವಾರ) ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಏಕರೂಪದ ಚಿಕಿತ್ಸೆಗೆ ಮಾರ್ಗಸೂಚಿ ರೂಪಿಸಲಾಗುತ್ತಿದೆ. ಡಾ. ರವಿ ನೇತೃತ್ವದಲ್ಲಿ ಹತ್ತು ಜನ ಪರಿಣತರ ನೇಮಕ ಮಾಡಿದ್ದೇವೆ. ಹೊಸ ಪ್ರಭೇದ ಓಮಿಕ್ರಾನ್‌ನಿಂದ ತೊಂದರೆ ಆದರೆ ಅದಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಚಿಕಿತ್ಸಾ ಮಾರ್ಗಸೂಚಿ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ, ಔಷಧ ದಾಸ್ತಾನು ಹೇಗಿರಬೇಕು, ಎಲ್ಲಿ ಇಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ.
ಅನೇಕ ದೇಶಗಳಲ್ಲಿ ಓಮಿಕ್ರಾನ್ ಪ್ರಭೇದ ಕಂಡು ಬಂದಿದ್ದು, ಅದನ್ನು ನಿಯಂತ್ರಣ ಮಾಡಬೇಕು. ನಮ್ಮ ರಾಜ್ಯದಲ್ಲಿಯೂ ಅದು ಅಕಸ್ಮಾತ್ ಅದು ಕಾಣಿಸಿಕೊಂಡರೆ ವೈದ್ಯಕೀಯ ಸಿದ್ಧತೆ ಹೇಗಿರಬೇಕು ಎಂಬುದರ ಕುರಿತು ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಮಾಡಲಾಗಿದೆ. ಆಸ್ಪತ್ರೆ ವ್ಯವಸ್ಥೆ, ವೈದ್ಯಕೀಯ ಸಂಸ್ಥೆ, ಖಾಸಗಿ ಆಸ್ಪತ್ರೆ ಸಿದ್ಧತೆ ಬಗ್ಗೆ ಚರ್ಚೆ ಆಗಿದೆ ಎಂದರು.
ವಿದೇಶದಿಂದ ಬಂದ ಪ್ರತಿಯೊಬ್ಬ ಪ್ರಯಾಣಿಕರಿಗೂ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಕಡ್ಡಾಯ ಮಾಡಿದ್ದೇವೆ. 2,500 ಜನರಿಗೆ ಪ್ರತಿನಿತ್ಯ ಕಡ್ಡಾಯ ಪರೀಕ್ಷೆ ಮಾಡಲಾಗುತ್ತದೆ. ವಿದೇಶಿ ಪ್ರಯಾಣಿಕರಿಗೆ ಏಳು ದಿನ ಕ್ವಾರಂಟೈನ್ ಕಡ್ಡಾಯ. ರೋಗ ಲಕ್ಷಣ ಇದ್ದರೆ ಐದನೇ ದಿನ ಆರ್.ಟಿ.ಪಿ.ಸಿ ಆರ್ ಪರೀಕ್ಷೆ ನಡೆಸಲಾಗುತ್ತದೆ. ರೋಗ ಲಕ್ಷಣ ಇಲ್ಲದಿದ್ದರೆ ಏಳನೇ ದಿನ ಟೆಸ್ಟಿಂಗ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಒಂದು ಡೋಸ್ ಪಡೆದ ಬಳಿಕ ಎರಡನೆಯ ಡೋಸ್ ಅನ್ನು ನಿಗದಿತ ಅವಧಿಯಲ್ಲಿ ಪಡೆದವರಿದ್ದಾರೆ. ಅವರಿಗೆ ಲಸಿಕೆ ಕೊಡುವುದಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಕಾನೂನು ತಂದು, ದಂಡ ಹಾಕಿ ಲಸಿಕೆ ನೀಡುವ ಚಿಂತನೆ ಇಲ್ಲ. ದಂಡ ಹಾಕಿ ಜನರಿಗೆ ಲಸಿಕೆ ಕೊಡುವ ಚಿಂತನೆ ಸರ್ಕಾರಕ್ಕಿರಲಿಲ್ಲ. ದಂಡ ಹಾಕಿ ಲಸಿಕೆ ನೀಡಲು ಸಭೆಯಲ್ಲಿ ತಜ್ಞರಿಂದ ಸಲಹೆ ನೀಡಲಾಗಿದೆ. ಆದರೆ ಎರಡನೇ ಡೋಸ್ ಲಸಿಕೆ ಪಡೆಯದವರಿಗೆ ಆಸ್ಪತ್ರೆ ವೆಚ್ಚ ಭರಿಸಬಾರದು ಎಂದು ಸಮಿತಿ ಸಲಹೆ ಮಾಡಿದೆ. ಈ ಕುರಿತು ಹಾಗೂ ಲಸಿಕೆ ಕಡ್ಡಾಯ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸುಧಾಕರ್ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ