ಓಮಿಕ್ರಾನ್ ಆತಂಕದ ಕಾರಣ ಕಠಿಣ ಕ್ರಮ ಅನಿವಾರ್ಯ; ಬೂಸ್ಟರ್ ಡೋಸ್ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೋವಿಡ್-19 ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುವುದು. ಅಲ್ಲದೆ ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಆರಂಭಿಕವಾಗಿಯೇ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಕೋವಿಡ್-19ರ ವೈಜ್ಞಾನಿಕ ಪ್ರಗತಿ ಮತ್ತು ಬೂಸ್ಟರ್ ಡೋಸ್ ಕೊಡುವ ಬಗ್ಗೆ ಚರ್ಚಿಸಲು ನಾಳೆ (ಗುರುವಾರ) ದೆಹಲಿಗೆ ಹೊರಟಿದ್ದೇನೆ. ಡೋಸ್ ನೀಡುವ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ಚರ್ಚಿಸುವೆ. ನಂತರ ಬೂಸ್ಟರ್ ಡೋಸ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಆರಂಭಿಕವಾಗಿಯೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವಿದೇಶಿಗಳಿಂದ ಬಂದ ಪ್ರತಿದಿನ ಸುಮಾರು 2000ದಿಂದ 2500 ಜನರು ಆಗಮಿಸುತ್ತಾರೆ. ಹೀಗಾಗಿ ವಿದೇಶದಿಂದ ಸಂಪೂರ್ಣ ತಪಾಸಣೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಕಳೆದ ಬಾರಿಯ ಅನುಭವದಿಂದಾಗಿ ಈ ಬಾರಿ ವಿದೇಶದಿಂದ‌ ಬಂದವರನ್ನು ಒಂದು ವಾರ ಗಮನಿಸುತ್ತೇವೆ. ವಿದೇಶದಿಂದ ಬಂದ ಪ್ರಯಾಣಿಕರ ಪೈಕಿ ಓರ್ವ ವ್ಯಕ್ತಿಯ ಕೋವಿಡ್‌ ಟೆಸ್ಟ್‌ ಸ್ಯಾಂಪಲನ್ನು ಎನ್‌ಸಿಬಿಎಸ್‌ಗೆ ಕಳಿಸಿದ್ದೇವೆ. ಅದರ ವರದಿ ಬಂದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ ಎಂದರು.
ವಿದೇಶ ಹಾಗೂ ಕೇರಳದಿಂದ ಬಂದವರಿಗೆ ನಿಗಾ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೇರಳ‌ ಗಡಿಗಳಲ್ಲಿ ಹೆಚ್ಚಿನ ತಪಾಸಣೆ ಮಾಡುತ್ತಿದ್ದೇವೆ ಲಸಿಕಾಕರಣ ತೀವ್ರಗೊಳಿಸಿದ್ದೇವೆ ಎಂದು ತಿಳಿಸಿದರು.
ಲಾಕ್ ಡೌನ್ ಮಾಡುವ ಪ್ರಸಾಪ್ತ ಇಲ್ಲ. ಮಾಡುವುದೂ ಇಲ್ಲ. ಜನರು ಆ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಕ್ರಿಸ್ ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ವೇಳೆ ನಿರ್ಬಂಧ ಹೇರುವ ಬಗ್ಗೆ ಸದ್ಯ ತೀರ್ಮಾನ ಮಾಡಿಲ್ಲ ಎಂದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ಮಾಡಿ ಹಲವು ವಿಚಾರ ಚರ್ಚೆ ಮಾಡಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ರಾಜ್ಯದಲ್ಲಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಪಿಜಿ ವೈದ್ಯರ ಕೋವಿಡ್ ಭತ್ಯೆ ಈಗಾಗಲೇ ಬಿಡುಗಡೆ ಆಗಿದೆ. ಆದರೆ ಸಮರ್ಪಕ ದಾಖಲೆ ಕೊರತೆಯಿಂದ ಭತ್ಯೆ ನೀಡಲಾಗಿಲ್ಲ. ಎರಡು-ಮೂರು ದಿನಗಳಲ್ಲಿ ಎಲ್ಲರಿಗೂ ಭತ್ಯೆ ವಿತರಣೆ ಮಾಡಲಾಗುವುದು ಎಂದರು.
ಗುತ್ತಿಗೆದಾರರಿಗೆ ಟೆಂಡರ್ ಹಂಚಿಕೆ ಮಾಡುವುದು ಮುಖ್ಯ ಕಾರ್ಯದರ್ಶಿ ಅಲ್ಲ. ಹೀಗಾಗಿ ಅವರನ್ನು ತನಿಖೆಗೆ ನೇಮಿಸಲಾಗಿದೆ
ಧಾರವಾಡದಲ್ಲಿ 306 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸುಮಾರು 7ಸಾವಿರ ಜನರ ತಪಾಸಣೆ ಮಾಡಲಾಗಿದೆ. ಏಳು ದಿನಗಳ ನಂತರ ಇಬ್ಬರಿಗೆ ಮಾತ್ರ ಪಾಸಿಟಿವ್ ಬಂದಿದೆ. ಕ್ರಮೇಣ ಇಳಿಕೆ ಆಗುತ್ತಿದೆ. ನಿಗಾ ವಹಿಸಲಾಗಿದೆ. ಭಯ ಪಡುವ ಅವಶ್ಯಕತೆ ಇಲ್ಲ ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement