ಕರ್ನಾಟಕದಲ್ಲಿ ಒಟ್ಟು 16 ಓಮಿಕ್ರಾನ್ ಸೋಂಕಿನ ಪ್ರಕರಣಗಳಿವೆ ಎಂಬ ಮಾಹಿತಿ ಸಿಕ್ಕಿದೆ: ಎಚ್ಕೆ. ಪಾಟೀಲ್ ಹೇಳಿಕೆ..!

ಗದಗ: ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 16 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಈ ಕುರಿತು‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಸಂಜೆ ವರೆಗೂ ಬಂದ ಮಾಹಿತಿ ಪ್ರಕಾರ ರಾಜ್ಯದಲ್ಲಿ 16 ಓಮಿಕ್ರಾನ್ ಸೋಂಕಿತ ರೋಗಿಗಳಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಇದು ಬಹಳ ಗಂಭೀರವಾದದ್ದು. ಆದರೆ ಜನರು ಭಯ ಪಡುವ ಅಗತ್ಯವಿಲ್ಲ. ಜಾಗೃತರಾಗಿರಬೇಕು‌. ಸರ್ಕಾರ ಮಾತ್ರ ಭಯದಿಂದಲೇ ಕೆಲಸ ಮಾಡಬೇಕು ಎಂದು ಎಚ್. ಕೆ. ಪಾಟೀಲ್ ಒತ್ತಾಯಿಸಿದರು.
ಓಮಿಕ್ರಾನ್ ವಿಚಾರವಾಗಿ ನಿರ್ಲಕ್ಷ್ಯ ಮಾಡಿದರೆ ತೊಂದರೆಯಾಗಲಿದೆ. ಓಮಿಕ್ರಾನ್ ಟೆಸ್ಟ್ ವರದಿ ಬರಲು 15 ದಿನಗಳು ಬೇಕಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಪರಿಸ್ಥಿತಿ ಹೀಗೇ ಮುಂದುವರಿದು ವರದಿಗೆ ವಿಳಂಬವಾದರೆ ಸೋಂಕಿತರ ಸಂಪರ್ಕದಿಂದ ಸೋಂಕು ಹಲವರಿಗೆ ಹಬ್ಬಬಹುದು ಎಂಬುದನ್ನು ಸರ್ಕಾರ ಗಮನಿಸಬೇಕು. ಈ ವಿಚಾರದಲ್ಲಿ ಸರ್ಕಾರ ತುರ್ತಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಜಿನೋಮ್ ಸೀಕ್ವೆನ್ಸ್ ಪತ್ತೆಗೆ 10 ರಿಂದ 12 ದಿನ ಬೇಕಾಗುತ್ತದೆ. ಆದರೆ ಓಮಿಕ್ರಾನ್ ಬಗ್ಗೆ ಮೊದಲೇ ಮಾಹಿತಿ ಇದ್ರೂ ಸರ್ಕಾರ ಚಿಕಿತ್ಸಾ ವಿದಾನ ಹೇಗಿರಬೇಕು ಎಂದು ಪಟ್ಟಿ ಸಿದ್ಧಪಡಿಸಿಲ್ಲ. ಆರೋಗ್ಯ ಇಲಾಖೆ ಮೂರನೇ ಅಲೆ ಎದುರಿಸಲು ಈಗಾಗಲೇ ಸಜ್ಜಾಗಬೇಕಾಗಿತ್ತು. ಆದರೆ ಆಗಿಲ್ಲ‌. ಸರ್ಕಾರ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸುಗಳನ್ನ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದರು.
ಕಳೆದ ವಾರ ವಿದೇಶದಿಂದ 436 ಪ್ರಯಾಣಿಕರು ಬಂದಿದ್ದಾರೆ. ಅದರಲ್ಲಿ ಹಲವರು ಆಫ್ರಿಕನ್ ಮೂಲದವರು. ಈ ಪೈಕಿ 100ಕ್ಕೂ ಹೆಚ್ಚು ಜನರು ಟೆಸ್ಟ್ ಮಾಡಿಸಿಕೊಳ್ಳದೆ ಹೋಗಿದ್ದಾರೆ. ಈಗ ಅವರನ್ನ ಸರ್ಕಾರ ಹುಡುಕುತ್ತಿದೆ. ಸರ್ಕಾರದ ಈ ವಿಳಂಬ ಸರಿಯಲ್ಲ. ವಿಮಾನ ನಿಲ್ದಾಣದಲ್ಲೇ ಸರ್ಕಾರ ಕ್ರಮ ಕೈಗೊಳ್ಳುವಂತಾಗಲಿ, ಸರ್ಕಾರ ಈ ಹಂತದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲದ ಅಧಿವೇಶನದ ಕುರಿತು ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೋ ಬೇಡವೋ ೆಂಬುದರ ಬಗ್ಗೆ ಸರ್ಕಾರ ಸಲಹಾ ಸಮಿತಿ ಸಲಹೆ ಪಡೆಯಬೇಕು. ಆತಂಕದ ವಾತಾವರಣದಲ್ಲಿ ಸದನ ನಡೆಸುವುದು ಸಾಧ್ಯವಿಲ್ಲ. ಒಂದು ಹಂತದಲ್ಲಿ ಬೆಂಗಳೂರಲ್ಲಿ ಅಧಿವೇಶನ ನಡೆಸುವುದೇ ಅಪಾಯಕಾರಿ ಅನ್ನಿಸುತ್ತಿದೆ. ಬೆಂಗಳೂರಿಗಿಂತ ಬೆಳಗಾವಿ ಸುರಕ್ಷಿತ ಅನ್ನಿಸುತ್ತದೆ, ಯಾಕೆಂದರೆ ಬೆಳಗಾವಿ ಮಹಾರಾಷ್ಟ್ರದ ಪಕ್ಕದಲ್ಲೇ ಇದ್ದರೂ ಓಮಿಕ್ರಾನ್ ಇಲ್ಲ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement