ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಪಾಕಿಸ್ತಾನ ಕಾರಣ ಎಂದು ವಾದಿಸಿದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಪಾಕಿಸ್ತಾನ ಕೈಗಾರಿಕೆಗಳ ನಿಷೇಧವನ್ನು ನೀವು ಬಯಸುತ್ತೀರಾ ಎಂದು ಪ್ರಶ್ನಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಉತ್ತರ ಪ್ರದೇಶದ ಕೈಗಾರಿಕೆಗಳು ಕಾರಣವಲ್ಲ. ಬದಲಿಗೆ ಪಾಕಿಸ್ತಾನದಿಂದ ಬರುತ್ತಿರುವ ಕಲುಷಿತ ಗಾಳಿಯಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ವಾದಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು, ಈ ಹೇಳಿಕೆಗೆ ಉತ್ತರ ಪ್ರದೇಶ ಸರ್ಕಾರವನ್ನುತೀವ್ರ ತರಾಟೆಗೆ ತೆಗೆದುಕೊಂಡಿದೆ.
ಹಾಗಾದರೆ ನೀವು, ಪಾಕಿಸ್ತಾನದ ಕೈಗಾರಿಕೆಗಳ ನಿಷೇಧವನ್ನು ಬಯಸುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದೆ. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿ, ಪಾಕಿಸ್ತಾನದಿಂದ ಬರುತ್ತಿರುವ ಮಾಲಿನ್ಯಕಾರಕ ಗಾಳಿಯು ದೆಹಲಿಯ ವಾಯು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.ಕೋವಿಡ್ ಕಾರಣದಿಂದ ರಾಜ್ಯದ ಕೈಗಾರಿಕೆಗಳು ಇಳಿಮುಖವಾಗಿರುವುದರಿಂದ ಮತ್ತು ಕಲುಷಿತ ಗಾಳಿಯು ದೆಹಲಿಯ ಕಡೆಗೆ ಹೋಗುವುದಿಲ್ಲವಾದ್ದರಿಂದ ಉತ್ತರ ಪ್ರದೇಶದ ಕೈಗಾರಿಕೆಗಳು ದೆಹಲಿಯ ಮಾಲಿನ್ಯದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಹೇಳಿ ಕೈಗಾರಿಕೆಗಳನ್ನು ಮುಚ್ಚುವುದಕ್ಕೆ ಉತ್ತರ ಪ್ರದೇಶ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದರು.
ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣಾ ಆಯೋಗದ (CAQM) ಕೈಗಾರಿಕೆಗಳಿಗೆ ಕೇವಲ 8 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ ನೀಡುವ ನಿರ್ಧಾರವು ಕಬ್ಬು ಮತ್ತು ಡೈರಿ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ವಾದಿಸಿತ್ತು ಹಾಗೂ ದೆಹಲಿ ವಾಯು ಮಾಲಿನ್ಯಕ್ಕೆ ಪಾಕಿಸ್ತಾನದ ಕೈಗಾರಿಕೆಗಳು ಕಾರಣ ಎಂದು ಹೇಳಿತ್ತು. ಆಗ ಮುಖ್ಯನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ಪಾಕಿಸ್ತಾನ ಕೈಗಾರಿಕೆಗಳ ನಿಷೇಧವನ್ನು ನೀವು ಬಯಸುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿತು.
ಈ ವೇಳೆ ವಕೀಲರ ವಿರುದ್ಧ ಗರಂ ಆದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ, ಮೊದಲು ಆಯೋಗದ ಮೊರೆ ಹೋಗಿ, ವಾಯುಮಾಲಿನ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಹೇಳಿ ಎಂದು ಸೂಚಿಸಿತು.
ವಾಯುಗುಣಮಟ್ಟ ನಿರ್ವಹಣೆ ಆಯೋಗವು ರಾಜಧಾನಿಯಲ್ಲಿನ ವಾಯುಮಾಲಿನ್ಯ ಪರಿಸ್ಥಿತಿಯನ್ನು ಪರಿಶೀಲಿಸಲು ಕಾರ್ಯಪಡೆಯೊಂದನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್ 24 ಗಂಟೆಗಳ ಗಡುವು ನೀಡಿದೆ.
ಪರಿಸರ ಹೋರಾಟಗಾರ ಆದಿತ್ಯ ದುಬೆ ಮತ್ತು ಕಾನೂನು ವಿದ್ಯಾರ್ಥಿ ಅಮನ್ ಬಂಕಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
“


ನಿಮ್ಮ ಕಾಮೆಂಟ್ ಬರೆಯಿರಿ