ಓಮಿಕ್ರಾನ್ ತಡೆಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ: ಪ್ರಮುಖಾಂಶಗಳು..

ಬೆಂಗಳೂರು: ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೊರೊನಾ ನಿಯಂತ್ರಣಕ್ಕೆ ಎಚ್ಚರಿಕೆ, ಟೆಸ್ಟ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಷನ್ ಹೀಗೆ ಪಂಚಸೂತ್ರಗಳ ಅಳವಡಿಸಿಕೊಂಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಶಾಲಾ ಮಕ್ಕಳ ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಮದುವೆ, ಸಭೆ, ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಶಾಲಾ-ಕಾಲೇಜುಗಳಲ್ಲಿ 2022ರ ಜ.15ರ ವರೆಗೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
ಆರೋಗ್ಯ ಕಾರ್ಯಕರ್ತರು, 65 ವರ್ಷ ಮೇಲ್ಪಟ್ಟವರು, ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಟೆಸ್ಟಿಂಗ್ ಕಡ್ಡಾಯ. ಮಾಲ್, ಚಿತ್ರಮಂದಿರ ಪ್ರವೇಶಕ್ಕೆ 2 ಡೋಸ್ ಕಡ್ಡಾಯ. ಮೈಕ್ರೋ ಕಂಟೇನ್ಮೆಂಟ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ. ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶಗಳಲ್ಲಿ ₹ 250, ಗ್ರಾಮೀಣ ಭಾಗದಲ್ಲಿ ₹ 100 ದಂಡ ವಿಧಿಸಲಾಗುವುದು. ಮಾರ್ಗಸೂಚಿ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

* ಶಾಲಾ ಮಕ್ಕಳ ಪೋಷಕರಿಗೆ ಎರಡು ಡೋಸ್‌ ಕೊರೊನಾ ಲಸಿಕೆ ಕಡ್ಡಾಯ
* ಶಾಲಾ -ಕಾಲೇಜುಗಳಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ
* ಸಿನಿಮಾ ಮಂದಿರ, ಮಾಲ್‌ಗಳಿಗೆ ಹೋಗಬೇಕಾದರೆ ಎರಡು ಡೋಸ್ ಕೊರೊನಾ ಲಸಿಕೆ ಪಡೆದುಕೊಂಡಿರುವುದು ಕಡ್ಡಾಯ
* ಮದುವೆ ಸಮಾರಂಭಗಳಲ್ಲಿ 500ರ ವರೆಗೆ ಸೇರಲು ಮಾತ್ರ ಅವಕಾಶ
* ಪ್ರತಿದಿನ‌ ಒಂದು ಲಕ್ಷ ಸ್ಯಾಂಪಲ್‌ಗಳನ್ನು ಕೊರೊನಾ ಪರೀಕ್ಷೆಗೆ ಸೂಚನೆ
*ಆರೋಗ್ಯ ಇಲಾಖೆಗೆ ಆಕ್ಸಿಜನ್ ಬೆಡ್, ಐಸಿಯು ಬೆಡ್ ಸಿದ್ಧವಾಗಿಡಲು ಸೂಚನೆ
* ಆಕ್ಸಿಜನ್ ಪ್ಲ್ಯಾಂಟ್ ಮತ್ತೆ ಸಜ್ಜುಗೊಳಿಸಲು ಸರಕಾರದಿಂದ ಸೂಚನೆ
* ಆಕ್ಸಿಜನ್ ಲಭ್ಯತೆ, ಸಾಗಾಟ ಸಮಸ್ಯೆ‌ ಆಗದಂತೆ ನೋಡಿಕೊಳ್ಳಲು ರಚಿಸಲಾಗಿದ್ದ ಸಮಿತಿಗೆ ಮತ್ತೆ ಕಾರ್ಯಾರಂಭ ಮಾಡಲು ಆದೇಶ
* ರಾಜ್ಯಾದ್ಯಂತ ಕಂಟ್ರೋಲ್ ರೂಂ ಮತ್ತೆ ಆರಂಭಕ್ಕೆ ಸೂಚನೆ
* ಔಷಧಿ ಸಮಸ್ಯೆಗಳು ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಸಲಹೆ
* ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಎನ್‌ಸಿಬಿಎಸ್ ಪ್ರಯೋಗಾಲಯದ ವಿವರವಾದ ವರದಿ ಒದಗಿಸುವಂತೆ ಮನವಿಗೆ ನಿರ್ಧಾರ
ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಬಂದ ನಂತರವೇ ಹೊರಗೆ ಬಿಡಲು ಸೂಚನೆ,
ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಕೆ.
*ಈಗ ವರದಿಯಾಗಿರುವ ಎರಡೂ ಪ್ರಕರಣಗಳ ಪರೀಕ್ಷಾ ವರದಿಯನ್ನು ವಿಶ್ಲೇಷಿಸಿ ಸಲಹೆ ನೀಡುವಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೆ ಸೂಚನೆ

*ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗೆ ಅಧಿಕಾರಿಗಳಿಗೆ ಸೂಚನೆ
* ಸರ್ಕಾರಿ ನೌಕರರು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ
*ನರ್ಸಿಂಗ್, ಅರೆವೈದ್ಯಕೀಯ ತರಬೇತಿ ಸಂಸ್ಥೆಗಳಲ್ಲಿ ಸಂಪೂರ್ಣ ಟೆಸ್ಟಿಂಗ್. 65 ವರ್ಷ ಮೇಲ್ಪಟ್ಟವರು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಪರೀಕ್ಷೆ

ನಿಮ್ಮ ಕಾಮೆಂಟ್ ಬರೆಯಿರಿ

advertisement