ಕರ್ನಾಟಕದ ಮಾಜಿ ರಾಜ್ಯಪಾಲ, ಆಂಧ್ರದ ಮಾಜಿ ಸಿಎಂ ರೋಸಯ್ಯ ನಿಧನ

ಹೈದರಾಬಾದ್: ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ(88 ವರ್ಷ) ಶನಿವಾರ ನಿಧನರಾಗಿದ್ದಾರೆ.
ಅವರು ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ 2009-2010ರಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ರಾಜ್ಯಪಾಲರಾಗಿ 2014ರಲ್ಲಿ ಜೂನ್‌ 28ರಿಂದ ಆಗಸ್ಟ್ 31ರವರೆಗೆ ಅಲ್ಪಾವಧಿ ಸೇವೆ ಸಲ್ಲಿಸಿದ್ದರು. ತಮಿಳುನಾಡಿನ ರಾಜ್ಯಪಾಲರಾಗಿ 2011 ರಿಂದ 2016ರ ವರೆಗೆ ಕಾರ್ಯನಿರ್ವಹಿಸಿದ್ದರು. ಕರ್ನಾಟಕದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವಧಿ ಮುಗಿದಿದ್ದರಿಂದ ತಮಿಳುನಾಡಿನ ಜತೆಗೆ ಹೆಚ್ಚುವರಿಯಾಗಿ ಕರ್ನಾಟಕದ ಜವಾಬ್ದಾರಿ ನೀಡಲಾಗಿತ್ತು.
ಶಿವವಲಕ್ಷ್ಮಿ ಅವರನ್ನು ವಿವಾಹವಾಗಿದ್ದ ರೋಸಯ್ಯ ಅವರಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದಾರೆ.
ಹಲವು ದಶಕಗಳ ಕಾಲ ರಾಜಕೀಯದಲ್ಲಿದ್ದ ಅವರು ಕಾಂಗ್ರೆಸ್‌ ಶಾಸಕರಾಗಿ, ವಿಧಾಪರಿಷತ್ ಸದಸ್ಯರಾಗಿ, ಸಂಸದರಾಗಿ ಅನೇಕ ಬಾರಿ ಆಯ್ಕೆಯಾಗಿದ್ದರು. ಆಂಧ್ರಪ್ರದೇಶ ವಿಧಾನಸಭೆಯಲ್ಲಿ 16 ಬಾರಿ ಬಜೆಟ್ ಮಂಡಿಸಿದ ದಾಖಲೆ ಅವರದ್ದು.
1933ರ ಜುಲೈ ತಿಂಗಳಲ್ಲಿ ಗುಂಟೂರು ಜಿಲ್ಲೆಯ ವೆಮೂರು ತಾಲೂಕಿನ ತೆನಾಲಿ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರು, ಆಂಧ್ರ ವಿವಿಯಲ್ಲಿ ವಾಣಿಜ್ಯ ಪದವಿ ಪಡೆದಿದ್ದರು. ವಿದ್ಯಾರ್ಥಿ ನಾಯಕರಾಗಿದ್ದಲೇ ರಾಜಕೀಯಕ್ಕೆ ಧುಮುಕಿದರು.
ಸ್ವತಂತ್ರ ಪಾರ್ಟಿ ನಾಯಕ ಎನ್‌ಜಿ ರಂಗ ಅನುಯಾಯಿಯಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಅವರು ನಂತರ ಕಾಂಗ್ರೆಸ್ ಸೇರಿದ್ದರು. ರೋಸಯ್ಯ ಆಂಧ್ರಪ್ರದೇಶ ರಾಜ್ಯ ಬಜೆಟ್ ಅನ್ನು 16 ಬಾರಿ ಮಂಡಿಸಿದ್ದಾರೆ. ಇದು ಭಾರತದಲ್ಲಿಯೇ ದಾಖಲೆಯಾಗಿದೆ. ಟಿ. ಅಂಜಯ್ಯ, ಕೊಟ್ಲಾ ವಿಜಯ ಭಾಸ್ಕರ ರೆಡ್ಡಿ, ಎನ್. ಜನಾರ್ದನ ರೆಡ್ಡಿ ಮತ್ತು ವೈ.ಎಸ್. ರಾಜಶೇಖರ ರೆಡ್ಡಿ ಸಂಪುಟಗಳಲ್ಲಿ ಸಚಿವರಾಗಿದ್ದರು.ವೈಎಸ್ ರಾಜಶೇಖರ ರೆಡ್ಡಿ ಆಕಸ್ಮಿಕ ನಿಧನದ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. 2010ರ ನವೆಂಬರ್‌ನಲ್ಲಿ ಆರೋಗ್ಯದ ಕಾರಣ ನೀಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರೋಸಯ್ಯ ಅವರಿಗೆ ಆಂಧ್ರ ವಿವಿ 2007ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.

ಪ್ರಮುಖ ಸುದ್ದಿ :-   ಜೂನ್ 22ರ ವರೆಗೆ ದೇಶಾದ್ಯಂತ ಟೆಲಿಗ್ರಾಂ ಬಂದ್‌ ; ನೀಟ್ ಮರುಪರೀಕ್ಷೆ ಅಕ್ರಮ ತಡೆಗೆ ಕ್ರಮ : ತೊಂದರೆಗೆ ಕ್ಷಮೆ ಕೋರಿದ ಎನ್‌ಟಿಎ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement