ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಶಿವರಾಮಣ್ಣ ಹಾಗೂ ಶರಪಂಜರ ಶಿವರಾಂ ಎಂದೇ ಗುರುತಿಸಿಕೊಂಡಿದ್ದ, ಸುಮಾರು ಆರು ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಹಿರಿಯ ನಟ ಶಿವರಾಂ ಇಂದು (ಶನಿವಾರ) ನಿಧನರಾಗಿದ್ದಾರೆ.
ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧಯಾಹ್ನ ನಮ್ಮನ್ನಗಲಿದ್ದಾರೆ.
1958ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ ಅವರು, ಸಣ್ಣ ಪಾತ್ರಗಳ ಮೂಲಕ ಬಂದವರು ಮುಂದೆ ಚಿತ್ರಗಳನ್ನು ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದರು. ಅನೇಕ ನಾಟಕಗಳಲ್ಲಿ ನಟಿಸಿದ ಕಾರಣ ನಿರ್ದೇಶಕ ಕೋರಲ್ ಸೀತಾರಾಮ್ ಶಾಸ್ತ್ರಿಗಳು ಬೆರೆತ ಜೀವ ಎಂಬ ಸಿನಿಮಾಗೆ ಬಣ್ಣ ಹಚ್ಚುವಂತೆ ತಿಳಿಸಿದರು. ಇದಾದ ಬಳಿಕ 1970ರ ಬಳಿಕ ಹೆಚ್ಚೆಚ್ಚು ಸಿನಿಮಾ ಸಿಕ್ಕಿದವು. ಶರ ಪಂಜರ ಸಿನಿಮಾ ಜೀವನದ ತಿರುವು ನೀಡಿತು.
ಅವರ ಸಹೋದರ ಬಾಲಿವುಡ್ ನ ಖ್ಯಾತ ನಿರ್ದೇಶಕರಾಗಿದ್ದ ರಾಮನಾಥನ್ ಜೊತೆ ಸೇರಿ 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಹೃದಯ ಸಂಗಮ’ ಚಿತ್ರ ನಿರ್ಮಾಣ ಮಾಡಿದರು.
ಬಳಿಕ ಪುಟ್ಟಣ್ಣನವರ ಸೂಪರ್ ಹಿಟ್ ಚಿತ್ರ ‘ಗೆಜ್ಜೆಪೂಜೆ’ ಹಾಗೂ ‘ಉಪಾಸನೆ’ ಚಿತ್ರಗಳನ್ನು ನಿರ್ಮಿಸಿದರು. ರಾಶಿ ಬ್ರದರ್ಸ್ ಮೂಲಕ ಸೂಪರ್ ಸ್ಟಾರ್ ಗಳಾದ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ರಜನಿಕಾಂತ್ ಅಭಿನಯದ ಬಾಲಿವುಡ್ ಚಿತ್ರ ‘ಗಿರಫ್ದಾರ್’ ಚಿತ್ರ ನಿರ್ಮಾಣ ಮಾಡಿದ್ದರು. ರಜನಿಕಾಂತ್ ನಟನೆಯ’ಧರ್ಮದೊರೈ’ ಮುಂತಾದ ಚಿತ್ರಗಳು ನಿರ್ಮಾಣವಾಗಿದ್ದವು. ವರನಟ ಡಾ.ರಾಜ್ ಕುಮಾರ್ ಅವರ ‘ನಾನೊಬ್ಬಕಳ್ಳ’ ಚಿತ್ರವನ್ನು ಕೂಡ ರಾಶಿ ಬ್ರದರ್ಸ್ ನಿರ್ಮಿಸಿದ್ದರು.
ಶಿವರಾಂ ನಟನೆಯ ಮರೆಯಲಾರದಷ್ಟು ಅಸಂಖ್ಯಾತ ಚಿತ್ರಗಳಿವೆ. ಅದರಲ್ಲಿ ಶರಪಂಪಜರ ಚಿತ್ರದ ಅಡುಗೆ ಭಟ್ಟ, ಶುಭಮಂಗಳ ಚಿತ್ರದ ಸ್ನೇಹಿತ, ನಾಗರಹಾವು ಚಿತ್ರದ ವರದ ಮೊದಲಾದ ಪಾತ್ರಗಳು ಮನೆ ಮಾತಾಗಿದ್ದವು. ‘ಡ್ರೈವರ್ ಹನುಮಂತು’ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವರಾಂ, ಅದರಲ್ಲಿ ಹಾಡನ್ನು ಕೂಡ ಹಾಡಿದ್ದರು.ಡ್ರೈವರ್ ಹನುಮಂತು ಚಿತ್ರದಲ್ಲಿ ನಾಯಕನಟನಾಗಿಯೂ ನಟಿಸಿದ್ದ ಶಿವರಾಂ ಅವರಿಗೆ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ತಾಯಿ ಸಾಹೇಬ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಅನೇಕ ಸಂಘ ಸಂಸ್ಥೆಗಳಿಂದ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ, ಶಿವರಾಂ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
1938ರ, ಜನವರಿ 28ರಂದು ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಗಡಿಭಾಗದ ಚೂಡಸಂದ್ರದಲ್ಲಿ ಜನಿಸಿದ್ದರು. 7 ಮಕ್ಕಳಲ್ಲಿ ಒಬ್ಬರಾಗಿದ್ದ ಇವರು ವಿದ್ಯಾರ್ಥಿ ದೆಸೆಯಿಂದಲೇ ರಂಗಭೂಮಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಬಂದಿದ್ದ ಅವರಿಗೆ ರಂಗಭೂಮಿ ಸೆಳೆತದಿಂದ ಗೆಳೆಯರ ಜೊತೆ ಶಾರದ ನಾಟಕ ಮಂಡಳಿ ಸ್ಥಾಪಿಸಿ ನಾಟಕ ಆಡುತ್ತಿದ್ದರು. 1954ರಲ್ಲಿ ಚಿತ್ರಕಲಾವಿದ ಸಂಸ್ಥೆ ಸೇರಿದ್ದರು.
ಲಗ್ನಪತ್ರಿಕೆ ಮೂಲಕ ಶ್ರೀನಾಥ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಶಿವರಾಮಣ್ಣ ಅವರಿಗೆ ಸೇರುತ್ತದೆ. ಪುಟ್ಟಣ್ಣ ಕಣಗಾಲ್ ಹಾಗೂ ಸಿಂಗೀತಂ ಶ್ರೀನಿವಾಸರಾವ್ ಅವರಿಗೆ ಸಹಾಯಕರಾಗಿ ದುಡಿದ ಹೆಸರೂ ಇದೆ.
ಶಿವರಾಂ ಅಪಾರ ದೈವ ಭಕ್ತರಾಗಿದ್ದರು. ಅದರಲ್ಲೂ ಅಯ್ಯಪ್ಪನ ದರ್ಶನಕ್ಕಾಗಿ ಪ್ರತಿಬಾರಿ ಶಬರಿಮಲೆ ಯಾತ್ರೆಗೆ ಹೋಗುತ್ತಿದ್ದರು.
48 ಬಾರಿ ಅವರು ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ವಿಶೇಷವೆಂದರೆ ಅವರು ರಾಜ್ ಕುಮಾರ್ ಕುಟುಂಬದ ಗುರುಸ್ವಾಮಿಗಳಾಗಿದ್ದರು ಅವರ ಮಾರ್ಗದರ್ಶನದಲ್ಲಿ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ನಟರು ಹಲವು ಬಾರಿ ಶಬರಿ ಮಾಲೆ ಯಾತ್ರೆ ಕೈಗೊಂಡಿದ್ದಾರೆ.
ಗುರು ಸ್ವಾಮಿಗಳಾಗಬೇಕಾದರೆ ದೈಹಿಕ ಮತ್ತು ಮಾನಸಿಕವಾಗಿ ಪರಿಶುದ್ಧರಾಗಿರಬೇಕಾಗುತ್ತಾದೆ. ಕಠಿಣ ವ್ರತ ಪಾಲನೆ ಮಾಡಿ 18 ಬಾರಿ ಶಬರಿ ಮಾಲೆಯ ಕಠಿಣ ವ್ರತ ಕೈಗೊಂಡು ದರ್ಶನ ಮಾಡಬೇಕು.ಆಗ ಮಾತ್ರ ಈ ಗುರು ಸ್ವಾಮಿ ಆಗಲು ಸಾಧ್ಯ.
ಅದೇ ರೀತಿ ಕೆಟ್ಟ ಚಟಗಳುಮ ದುರಾಭ್ಯಾಸ, ದುಷ್ಟ ಚಿಂತನೆಗಳಿದ್ದ ದೂರವಿದ್ದ ಶಿವರಾಂ ಅವರು ಅಯ್ಯಪ್ಪನ ಪರಮ ಭಕ್ತರಾಗಿದ್ದರು. ಇದೇ ಕಾರಣಕ್ಕೆ ಶಿವರಾಂ ಅವರನ್ನು ದೊಡ್ಮನೆ ಗುರಸ್ವಾಮಿಗಳಾಗಿ ಸ್ವೀಕರಿಸಿ, ಅವರ ಮಾರ್ಗದರ್ಶನದಲ್ಲಿ ಪ್ರತಿ ಬಾರಿ ಅಯ್ಯಪ್ಪನ ದರ್ಶನಕ್ಕೆ ಹೋಗುತ್ತಿದ್ದರು.
ದೊಡ್ಮನೆಗೂ ನಟ ಶಿವರಾಂ ಅವರಿಗೂ ಅವಿನಾಭಾವ ಸಂಬಂಧ. ಬೆಂಗಳೂರಿನಲ್ಲಿ ನಟ ಶಿವರಾಂ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪ ಸ್ವಾಮಿ ಯಾತ್ರೆ ಕೈಗೊಂಡಿದ್ದರು. ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಅಕಾಲಿ ಅಗಲಿಕೆ ಸುದ್ದಿ ತಿಳಿದ ಅವರು ಕಣ್ಣೀರಿಟ್ಟು,ಕುಸಿದಿದ್ದರು


ನಿಮ್ಮ ಕಾಮೆಂಟ್ ಬರೆಯಿರಿ