ಫಲಿಸದ ಚಿಕಿತ್ಸೆ- ಕನ್ನಡ ಚಿತ್ರ ರಂಗದ ಹಿರಿಯ ನಟ ಶಿವರಾಂ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಚೇತನ ನಟ ಎಸ್​.ಶಿವರಾಂ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಮನೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಬೆಂಗಳೂರಿನ ವಿದ್ಯಾಪೀಠ ಬಳಿ ಇರುವ ಪ್ರಶಾಂತ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಚಲನಚಿತ್ರ, ಕಿರುತೆರೆ ಸೇರಿದಂತೆ ಹಲವಾರು ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಅವರಿಗೆ ಅಪಘಾತವಾಗಿ, ತಲೆಗೆ ಪೆಟ್ಟು ಬಿದ್ದಿತ್ತು. ವಯಸ್ಸಾದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ನಮ್ಮ ತಂದೆ ಶಿವರಾಮ್​ ಅವರು ಇನ್ನು ನಮ್ಮ ಜತೆ ಇಲ್ಲ. ಅವರು ಭಗವಂತನ ಪಾದ ಸೇರಿದ್ದಾರೆ.
ಆಸ್ಪತ್ರೆ ವತಿಯಿಂದ ಎಲ್ಲಾ ರೀತಿ ಚಿಕಿತ್ಸೆ ನೀಡಿದ್ದಾರೆ. ಆದರೆ ಅವ​ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಅವರ ಮಗ ಲಕ್ಷ್ಮೀಶ್​ ಹೇಳಿದ್ದಾರೆ.
938ರಲ್ಲಿ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದ ಎಸ್. ಶಿವರಾಂ, 6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಅವರು ಶಿವರಾಮಣ್ಣ ಎಂದೇ ಎಲ್ಲರಿಗೂ ಪರಿಚಿತರಾಗಿದ್ದ ಅವರು ಹೆಚ್ಚಾಗಿ ಪೋಷಕ ನಟನಾಗಿ, ಹಾಸ್ಯನಟನಾಗಿ ನಟಿಸಿದ್ದರು. ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಅವರು ಕೊಡುಗೆ ನೀಡಿದ್ದರು. ಸೋದರ ರಾಮನಾಥನ್ ಜತೆ ಸೇರಿ ‘ರಾಶಿ ಬ್ರದರ್ಸ್‌’ ಸಿನಿಮಾ ಸಂಸ್ಥೆ ಸ್ಥಾಪಿಸಿ ಹಲವು ಚಿತ್ರ ನಿರ್ಮಿಸಿದ್ದರು. ಅವರೊಂದಿಗೆ ಸೇರಿಕೊಂಡು 1972 ರಲ್ಲಿ ‘ಹೃದಯ ಸಂಗಮ’ವನ್ನು ನಿರ್ದೇಶಿಸುವುದರ ಜೊತೆಗೆ ರಾಶಿ ಬ್ರದರ್ಸ್ ಹೆಸರಿನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದರು.
ಸಹೋದರರು ಕನ್ನಡ ಮಾತ್ರವಲ್ಲದೆ ಬಾಲಿವುಡ್ ಚಲನಚಿತ್ರಗಳನ್ನೂ ನಿರ್ಮಿಸಿದ್ದರು. ನಟನಾಗಿ, ಶಿವರಾಮ್ ಅವರು ಅನೇಕ ಧೀಮಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದು, ಪುಟ್ಟಣ್ಣ ಕಣಗಾಲ್ ಅವರೊಂದಿಗಿನ ಅವರ ಒಡನಾಟವು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ರಾಜಕುಮಾರ್ ಅಭಿನಯದ ಸಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಎಲ್ಲಾ ಏಳು ಕನ್ನಡ ಚಲನಚಿತ್ರಗಳಲ್ಲಿ ಅವರು ಮುಖ್ಯ ಭಾಗವಾಗಿದ್ದರು.
ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜತೆಯೂ ಶಿವರಾಂ ಕೆಲಸ ಮಾಡಿದ್ದರು. ಹಲವು ದಿಗ್ಗಜ ನಟರೊಂದಿಗೆ ಶಿವರಾಂ ತೆರೆ ಹಂಚಿಕೊಂಡಿದ್ದರು.
ಬೆರೆತ ಜೀವ (1965), ಮಾವನ ಮಗಳು (1965), ದುಡ್ಡೇ ದೊಡ್ಡಪ್ಪ (1966), ಲಗ್ನಪತ್ರಿಕೆ (1967), ಶರಪಂಜರ (1971), ಮುಕ್ತಿ(1971), ಭಲೇ ಅದೃಷ್ಟವೋ ಅದೃಷ್ಟ(1971), ಸಿಪಾಯಿ ರಾಮು (1972), ನಾಗರಹಾವು(1972), ನಾ ಮೆಚ್ಚಿದ ಹುಡುಗ (1972), ಹೃದಯಸಂಗಮ (1972), ಕಿಲಾಡಿ ಕಿಟ್ಟು (1978), ನಾನೊಬ್ಬ ಕಳ್ಳ (1979), ಹಾಲುಜೇನು (1982), ಪಲ್ಲವಿ ಅನುಪಲ್ಲವಿ (1983), ಭಜರಂಗಿ (2013), ಬಂಗಾರ s / O ಬಂಗಾರದ ಮನುಷ್ಯ (2017) ಮೊದಲಾದ ಸಿನಿಮಾಗಳಲ್ಲಿ ಶಿವರಾಂ ನಟಿಸಿದ್ದರು. ಮಕ್ಕಳ ಸೈನ್ಯ ಸೇರಿ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. 1980ರಲ್ಲಿ ‘ಡ್ರೈವರ್ ಹನುಮಂತು’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.
ಡಾ.ರಾಜ್ ಕುಮಾರ್ ಅವರ 175ನೇ ಸಿನಿಮಾ ನಾನೊಬ್ಬ ಕಳ್ಳ ಸಿನಿಮಾವನ್ನು ನಿರ್ಮಾಣ ಮಾಡಿದ್ದು ರಾಶಿ ಬ್ರದರ್ಸ್. 1985ರಲ್ಲಿ ಬಾಲಿವುಡ್ ಗಿರಫ್ತಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸ್ಟಾರ್ ಗಳಾದ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಹಾಗೂ ರಜನಿಕಾಂತ್ ನಟಿಸಿದ್ದರು. ಮೂವರು ಸೂಪರ್ ಸ್ಟಾರ್ ಗಳು ನಟಿಸಿದ್ದ ಭಾರತದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಕೂಡಾ ಇದರದ್ದಾಗಿದೆ. ಇತ್ತೀಚಿಗೆ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದರು. ಪಾತ್ರಗಳಲ್ಲಿ ತಮ್ಮದೇ ಆದ ಮ್ಯಾನರಿಸಂ ಮೂಲಕ ಮನೆಮಾತಾಗಿದ್ದ ಅವರು ಕನ್ನಡ ಚಿತ್ರ ರಂಗದ ಹಿರಿಯ ಹಾಗೂ ಕಿರಿಯ ಪೀಳಿಗೆ ಕಲಾವಿದರೆಲ್ಲರಿಗೂ ಬೇಕಾಗಿದ್ದರು.
ಶಿವರಾಮ್ ಅವರು ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಗಡಿಭಾಗದ ಚೂಡಸಂದ್ರ ಎಂಬ ಗ್ರಾಮದಲ್ಲಿ 1938ರಲ್ಲಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣದ ನಂತರ ತಮ್ಮ ಹಿರಿಯ ಸಹೋದರ ಶ್ರೀಕಂಠೇಶ್ವರ ಅಯ್ಯರ್ ಅವರ ಜತೆಗೆ ಬೆಂಗಳೂರಿಗೆ ವಲಸೆ ಬಂದಿದ್ದರು. ಅಯ್ಯರ್ ಅವರು ಬೆಂಗಳೂರಿನಲ್ಲಿ ಪ್ರತಿಷ್ಠಿತ ವಾಣಿ ಟೈಪ್ ರೈಟಿಂಗ್ ತರಗತಿಯನ್ನು ನಡೆಸುತ್ತಿದ್ದರು. ಬೆಂಗಳೂರಿಗೆ ಬಂದ ಶಿವರಾಮ್ ಅವರು ಗುಬ್ಬಿ ವೀರಣ್ಣ ಕಂಪನಿಯ ನಾಟಕಗಳನ್ನು ಕಂಡು ಪ್ರಭಾವಿತರಾಗಿದ್ದರು. ಹಲವು ನಾಟಕಗಳಲ್ಲಿ ಅಭಿನಯಿಸಿದ್ದ ಶಿವರಾಮ್ ಅವರು 1958ರಲ್ಲಿ ಕು.ರಾ.ಸೀತಾರಾಮ್ ಶಾಸ್ತ್ರಿಗಳಂತಹ ಪ್ರಸಿದ್ಧ ನಿರ್ದೇಶಕರ ಜತೆ ಸಹಾಯಕರಾಗಿದ್ದರು.
ಶಿವರಾಮ್ 1965ರಲ್ಲಿ ಬೆರೆತ ಜೀವ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿಪರದೆಗೆ ಪ್ರವೇಶಿಸಿದ್ದರು. ಶಿವರಾಮ್ ಅವರು ಖ್ಯಾತ ನಿರ್ದೇಶಕರಾಗಿದ್ದ ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ, ಸಂಗೀತಂ ಶ್ರೀನಿವಾಸ್ ರಾವ್ ಮತ್ತು ಪುಟ್ಟಣ್ಣ ಕಣಗಾಲ್ ಅವರ ಜತೆಯೂ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ನಂತರ 2000 ಇಸವಿಯ ವರೆಗೆ ಶರಪಂಜರ, ನಾಗರಹಾವು, ಶುಭಮಂಗಳ, ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ, ಆಪ್ತಮಿತ್ರ, ಹುಚ್ಚ, ಬರ, ತಾಯಿ ಸಾಹೇಬ ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.
ಅವರು ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ 2013ರಲ್ಲಿ ಪದ್ಮಭೂಷಣ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಹಾಗೂ 2010-11ರಲ್ಲಿ ಡಾ.ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಪ್ರಮುಖ ಸುದ್ದಿ :-   ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement