ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಡೀಮ್ಡ್‌ ವಿವಿ ಘಟಿಕೋತ್ಸವದಲ್ಲಿ ಸಚಿವ ನಿರಾಣಿಗೆ ಗೌರವ ಡಾಕ್ಟರೇಟ್ ಪ್ರದಾನ

ಕರಾಡ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಕರಾಡ್ ನ ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಘಟಿಕೋತ್ಸವದಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಗೌರವ ಡಾಕ್ಟರೇಟ್‌ ಸ್ವೀಕರಿಸಿದರು.
ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಸಮಾಜಸೇವೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಸೇವೆ ಮತ್ತು ಎಂಆರ್ ಎನ್‌ ಫೌಂಡೇಶನ್‌ ಮೂಲಕ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿರುವ ಸಮಾಜಮುಖಿ ‌ಕೆಲಸಗಳನ್ನು ಪರಿಗಣಿಸಿ ವಿವಿ ಗೌರವ ಡಾಕ್ಟರೇಟ್ ನೀಡಿದೆ.
ತಮ್ಮ ಭಾಷಣದಲ್ಲಿ ಸಚಿವ ನಿರಾಣಿ ಅವರು ತಾವು ಬೆಳೆದ ಬಂದದಾರಿಯ ಬಗ್ಗೆ ಸಿಂಹಾವಲೋಕನ ಮಾಡಿದರು. ಹುಬ್ಬಳ್ಳಿಯ ಕೆಎಲ್‍ಇ ಹಾಗೂ ಪುಣೆಯಲ್ಲಿ ವ್ಯಾಸಂಗ ಮುಗಿಸಿದಾಗ ಕೆಲಸ ಸೇರುವಂತೆ ನನಗೆ ಅನೇಕರು ಸಲಹೆ ಮಾಡಿದರು.
ಒಂದು ವೇಳೆ ನಾನೇದರೂ ಉದ್ಯೋಗ ಪಡೆಯುವುದಕ್ಕೆ ಸೀಮಿತವಾಗಿದ್ದರೆ ಇಂದು ನಾನು ಉದ್ಯಮಿಯಾಗುತ್ತಿರಲಿಲ್ಲ ಎಂದು ಹೇಳಿದರು.
ನನ್ನ ತವರು ಜಿಲ್ಲೆಯಾಗಿದ್ದ ಬಾಗಲಕೋಟೆ ಸುತ್ತಮುತ್ತ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು ಅರಿಯುವ ಸಮಸ್ಯೆಗಳಿದ್ದವು. ಇದನ್ನು ಮನಗಂಡು ನಾನು ಸಣ್ಣ ಪ್ರಮಾಣದಲ್ಲಿಕಬ್ಬು ಅರಿಯುವ ಕಾರ್ಖಾನೆಯನ್ನು ಆರಂಭಿಸಿದೆ. ಹಂತಹಂತವಾಗಿ ಇದು ಬೆಳೆದು ಇಂದು ದೇಶದಲ್ಲೇ 2ನೇ ಅತಿಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಕಾರ್ಖಾನೆಯಾಗಿ ಬೆಳೆದಿದೆ ಎಂದರು.
ಎಂಆರ್ ಎನ್ ಗ್ರೂಪ್‍ನಲ್ಲಿ 75 ಸಾವಿರ ಉದ್ಯೋಗಿಗಳಿದ್ದಾರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು ಮೂರು ಲಕ್ಷ ಕಬ್ಬುಬೆಳೆಯುವ ಕುಟುಂಬಗಳಿಗೆ ನೆರಳಾಗಿದ್ದೇವೆ.. ಕೇವಲ ಸಕ್ಕರೆ ಕಾರ್ಖಾನೆಯಲ್ಲದೆ, ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್, ಎಥೆನಾಲ್ ಉತ್ಪಾದನೆ, ಗ್ರೀನ್ ಎನರ್ಜಿ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ನಾವು ತೊಡಗಿಸಿಕೊಂಡಿದ್ದೇವೆ ಎಂದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೃಷ್ಣ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ಡೀಮ್ಡ್ ವಿವಿಯ ಕುಲಪತಿ ಡಾ.ಮಿಶ್ರ, ಅಧ್ಯಕ್ಷ ಡಾ.ಸುರೇಶ್ ಗೋಸಲೆ, ರಿಜಿಸ್ಟ್ರಾರ್ಡಾ.ಎಂ.ವಿ. ಘೋರ್ಪಡೆ ಮತ್ತಿತರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement