ಪ್ರಧಾನಿ ಮೋದಿಯೇ ನನಗೆ ರಾಜೀನಾಮೆ ನೀಡಬೇಡಿ ಎಂದು ಹೇಳಿದ್ದರು: ದೇವೇಗೌಡ

ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದರೆ ರಾಜೀನಾಮೆ ನೀಡುವುದಾಗಿ ನಾನು ಘೋಷಿಸಿದ್ದೆ, ರಾಜೀನಾಮೆ ನಿರ್ಧಾರವನ್ನೂ ಮಾಡಿದ್ದೆ. ಆದರೆ ಪ್ರಧಾನಿ ಮೋದಿ ಅವರು ರಾಜೀನಾಮೆ ಕೊಡುವುದು ಬೇಡ ಎಂದು ಮನವೊಲಿಸಿದರು ಎಂದು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ರಾಜೀನಾಮೆ ವಿಚಾರದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ನಂತರ ಬಿಜೆಪಿಗೆ ಬಹುಮತ ಬಂದಿತ್ತು, ಆಗ ಪ್ರಧಾನಿ ನರೇಂದ್ರ ಮೋದಿ ನನಗೆ ದೆಹಲಿಗೆ ಬರುವಂತೆ ಪತ್ರ ಬರೆದಿದ್ದರು. ನಾನು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ನಾನು ಘೋಷಿಸಿದಂತೆ ರಾಜೀನಾಮೆ ನೀಡುತ್ತಿದ್ದೇನೆ. ಆದ್ದರಿಂದ ನನ್ನ ರಾಜೀನಾಮೆಯನ್ನು ತೆಗೆದುಕೊಳ್ಳಿ ಎಂದು ಹೇಳಿದ್ದೆ. ಆಗ ಪ್ರಧಾನಿ ಮೋದಿ ಚುನಾವಣಾ ರಾಜಕೀಯದಲ್ಲಿ ಇಂಥ ಮಾತುಗಳು ಹೇಳುವುದು ಸಹಜ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ, ರಾಜೀನಾಮೆ ನೀಡಬೇಡಿ ಎಂದು ಮನವೊಲಿಸಿದ್ದರು ಎಂದು ತಾವು ರಾಜೀನಾಮೆ ಕೊಡದೇ ಇದ್ದುದಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ.

ರೈತನ ಮಗನಾದ ನನ್ನ ರಾಜಕೀಯ ಬೆಳವಣಿಗೆಯನ್ನು ನನ್ನ ಜೊತೆಗಿದ್ದವರೇ ಸಹಿಸಲಿಲ್ಲ. ನನ್ನ ಬಗ್ಗೆ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಅದರಲ್ಲಿ ನಾನು ದೇಶದ ಅಭಿವೃದ್ಧಿಗೆ ಏನು ಮಾಡಿದ್ದೇನೆ ಎಂದು ಪ್ರಶ್ನಿಸುವವರಿಗೆ ಉತ್ತರ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ನಾನು ದೆಹಲಿಗೆ ಹೋದಾಗ ಒಂದು ಲೋಟ ಕಾಫಿ ಕೊಡಲಿಲ್ಲ. ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಹೋದಾಗ ನನ್ನ ಜೊತೆಗಿದ್ದವರೇ ಮೇಲೆ ಕುಳಿತಿದ್ದರು. ರಾಜೀನಾಮೆ ನೀಡಿ ಹೊರ ಬಂದಾಗಲೂ ಯಾರೂ ನನ್ನ ಜೊತೆಗಿರಲಿಲ್ಲ. ಇದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.
ನಮ್ಮ ಪಕ್ಷ ಎರಡು ಸ್ಥಾನಕ್ಕೆ ಕುಸಿದಾಗ ನನಗೆ ರಾಜಕೀಯ ಶಕ್ತಿ ತುಂಬಿದ್ದು ಹಾಸನ ಮತ್ತು ಮಂಡ್ಯ ಜಿಲ್ಲೆಗಳು. 2023-2024 ರ ಚುನಾವಣೆಗಳಲ್ಲೂ ನಾನು ಸುಮ್ಮನೆ ಕೂಡ್ರುವುದಿಲ್ಲ. 2023ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿಯೂ ಜನರ ಮುಂದೆ ಹೋಗಲಿದ್ದು, ನಮ್ಮ ಪಕ್ಷವನ್ನು ಮುಗಿಸುತ್ತೇವೆಎನ್ನುವವರ ವಿರುದ್ಧ ಎದ್ದು ನಿಲ್ಲುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ವಿಚಾರದಲ್ಲಿ ನಾನು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಮಾತನಾಡುವವರು ಸಂಸತ್‌ನಲ್ಲಿ ಗೋದ್ರಾ ಹತ್ಯಾಕಾಂಡದ ಬಗ್ಗೆ ನಾನು ಏನು ಮಾತನಾಡಿದ್ದೇನೆ ಎಂಬುದನ್ನು ದಾಖಲೆಗಳನ್ನು ತೆಗೆದು ನೋಡಲಿ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೀತಿಯೇ ಸಿದ್ದು, ಪರಮೇಶ್ವರ ವೀಡಿಯೊ ಹೊರಬರಬಹುದು : ರಮೇಶ ಜಾರಕಿಹೊಳಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement