ಶಿವಮೊಗ್ಗ: ನನ್ನ ಹಸುಗಳು ಹಾಲು ಕೊಡುತ್ತಿಲ್ಲ ಸ್ವಾಮಿ, ಠಾಣೆಗೆ ಕರೆಸಿ ಬುದ್ಧಿ ಹೇಳಿ ಎಂದು ಪೊಲೀಸರಿಗೆ ದೂರು ನೀಡಿದ ರೈತ..!

ಶಿವಮೊಗ್ಗ: ಗುಂಪುಗಳ ನಡುವೆ ಜಗಳವಾದರೆ ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ಇಲ್ಲೊಬ್ಬ ರೈತ ತನ್ನ ಹಸುಗಳು ಹಾಲು ಕೊಡುತ್ತಿಲ್ಲ ಅವುಗಳಿಗೆ ನೀವೇ ಬುದ್ಧಿಹೇಳಿ ಎಂದು ತನ್ನ ನಾಲ್ಕು ಹಸುಗಳ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾಳೆಹೊನ್ನೂರು ಬಳಿ ಈ ಘಟನೆ ನಡೆದಿದ್ದು, ಸಿದ್ದೀಪುರ ಗ್ರಾಮದ 40 ವರ್ಷದ ರೈತ ರಾಮಯ್ಯ ಎನ್ನುವವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಮ್ಮ ಮನೆಯಲ್ಲಿರುವ ನಾಲ್ಕು ಹಸುಗಳನ್ನು ಸರಿಯಾಗಿ ಮೇಯಲು ಕರೆದುಕೊಂಡು ಹೋದರೂ ಹಾಲು ಕೊಡುತ್ತಿಲ್ಲ. ಹಸುಗಳನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿ ನ್ಯಾಯ ಕೊಡಿಸಬೇಕು ಎಂದು ದೂರು ನೀಡಿದ್ದಾರೆ.
ದೂರಿನಲ್ಲಿ ರಾಮಯ್ಯ ಅವರು ಸಿದ್ದೀಪುರ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ವಾಸವಾಗಿದ್ದೇನೆ. ನಾಲ್ಕು ಹಸುಗಳನ್ನು ಸಾಕಿಕೊಂಡಿದ್ದೇನೆ. ಅವುಗಳನ್ನು ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 6 ಗಂಟೆ ವರೆಗೆ ಮೇಯಿಸಲು ಕರೆದೊಯ್ಯುತ್ತೇನೆ. ಹೀಗಿದ್ದರೂ ಪ್ರತಿದಿನ ಹಸುಗಳು ನನಗೆ ಹಾಗೂ ನನ್ನ ಹೆಂಡತಿ ರತ್ನಮ್ಮಗೆ ಹಾಲು ಕೊಡುತ್ತಿಲ್ಲ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತಾವು ನನ್ನ ನಾಲ್ಕು ಹಸುಗಳನ್ನು ಪೊಲೀಸ್ ಠಾಣೆಗೆ ಕರೆಸಿ ನಾಲ್ಕು ಬುದ್ಧಿ ಹೇಳಿ ನ್ಯಾಯ ಒದಗಿಸಿಕೊಡಬೇಕು ಎಂದು ದೂರು ನೀಡಿದ್ದಾರೆ. ರೈತನ ದೂರು ನೋಡಿ ಪೊಲೀಸರೇ ದಂಗು ಬಡಿದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ತನ್ನ ಹಸುಗಳು ಹಾಲು ಕೊಡುತ್ತಿಲ್ಲ ಎಂದು ರೈತ ಪೊಲೀಸರಿಗೆ ದೂರು ನೀಡಿದ ಪ್ರತಿ ವೈರಲ್ ಆಗಿದೆ..

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement