ತಜ್ಞರ ಅಭಿಪ್ರಾಯ ಪಡೆದ ನಂತರ ರಾತ್ರಿ ಕರ್ಫ್ಯೂ ಜಾರಿ ಬಗ್ಗೆ ತೀರ್ಮಾನ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ/ಬೀದರ:ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಚಿತ್ರಮಂದಿರ ಮತ್ತು ಮಾಲ್‌ಗಳಲ್ಲಿ ಶೇ. ೫೦ರಷ್ಟು ಮಾತ್ರ ಪ್ರವೇಶ, ನೈಟ್ ಕರ್ಫ್ಯೂ ಜಾರಿ ಪ್ರಸ್ತಾಪ ಸೇರಿದಂತೆ ಎಲ್ಲ ಪ್ರಸ್ತಾಪಗಳ ಬಗ್ಗೆ ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಓಮಿಕ್ರಾನ್ ಇಬ್ಬರಲ್ಲಿ ಕಂಡುಬಂದಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದು, ಇವರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದರು.
ಕೋವಿಡ್‌ ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ತಜ್ಞರ ಸಲಹೆ ಪಡೆದ ನಂತರ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ವೈರಸ್‌ ತಡೆಗಟ್ಟಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಜ್ಞರ ಜೊತೆ ಚರ್ಚಿಸಿ ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಬೀದರ ವರದಿ: ಬೀದರಿನ ಬಾಲ್ಕಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದ ಕೆಲವೆಡೆ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿನಿಲಯಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ನಿನ್ನೆ ಚಿಕ್ಕಮಗಳೂರಿನ ವಿದ್ಯಾರ್ಥಿನಿಲಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನು ತಡೆಗಟ್ಟಲು ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಕ್ಲಸ್ಟರ್‌ಗಳನ್ನು ರೂಪಿಸಿ, ಕ್ಲಸ್ಟರ್‌ಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದೇವೆ ಎಂದರು.
ಕೊರೊನಾ ಸೋಂಕು ಕಾಣಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಹಾಸ್ಟೆಲ್‌ ಅನ್ನು ಸೀಲ್ಡ್‌ಡೌನ್ ಮಾಡಿದ್ದೇವೆ. ವಿದ್ಯಾರ್ಥಿನಿಲಯಗಳಿಗೂ ಮಾರ್ಗಸೂಚಿಗಳನ್ನು ನೀಡಿದ್ದೇವೆ. ಕೊರೊನಾ ಸೋಂಕನ್ನು ತಡೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅದರಲ್ಲೂ ಓಮಿಕ್ರಾನ್ ವೈರಸ್‌ನಿಂದಾಗುವ ಆಗುವ ಪರಿಣಾಮಗಳನ್ನು ತಡೆಯಲು ಸರ್ವ ಸನ್ನದ್ಧವಾಗಿದ್ದೇವೆ ಎಂದು ಅವರು ಹೇಳಿದರು.
ವಿಧಾನಪರಿಷತ್‌ನ ಚುನಾವಣೆಯಲ್ಲಿ ಬಿಜೆಪಿ ತಾನು ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement