ತಮಿಳುನಾಡು ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್​

ನವದೆಹಲಿ: ತಮಿಳುನಾಡಿನ ಕುನೂರ್​ನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು, ಈಗ ವೆಲ್ಲಿಂಗ್​ಟನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡಿನ ವೆಲ್ಲಿಂಗ್​ಟನ್​ನಲ್ಲಿರುವ ಡಿಫೆನ್ಸ್​ ಸ್ಟಾಫ್ ಕಾಲೇಜ್​ಗೆ ತೆರಳುತ್ತಿದ್ದ ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೊಯಮತ್ತೂರಿನ ಸೂಲೂರು ಸಮೀಪ ಹೆಲಿಕಾಪ್ಟರ್​ ಪತನಗೊಂಡು ಮೃತಪಟ್ಟರು. ರಾವತ್ ಅವರೊಂದಿಗೆ ಅವರ ಪತ್ನಿ ಮಧುಲಿಕಾ ರಾವತ್, ಸೆಕ್ಯುರಿಟಿ ಕಮಾಂಡೊಗಳು, ಡೆಫೆನ್ಸ್ ಅಸಿಸ್ಟೆಂಟ್ ಮತ್ತು ವಾಯುಪಡೆಯ ಪೈಲಟ್ ಮೃತಪಟ್ಟರು. ಈಗ ಬದುಕುಳಿದಿರುವ ವರುಣ್‌ ಸಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2020ರಲ್ಲಿ ತಮ್ಮ ತೇಜಸ್ ಯುದ್ಧವಿಮಾನವನ್ನು ಕಾಪಾಡಿಕೊಂಡಿದ್ದಕ್ಕಾಗಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೌರ್ಯ ಚಕ್ರ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ವರುಣ್ ಸಿಂಗ್ ಸಹ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಾಯುಪಡೆಯು ಟ್ವೀಟ್​ ಮೂಲಕ ತಿಳಿಸಿದೆ. ಘಟನೆ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೃತಪಟ್ಟಿವರಿಗೆ ಸಂತಾಪ ಸೂಚಿಸಿದ್ದಾರೆ. ದುರ್ಘಟನೆಯಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಆಗಸ್ಟ್ 15ರಂದು ವಿಂಗ್ ಕಮಾಂಡರ್​ ವರುಣ್ ಸಿಂಗ್ ಹಗುರ ಯುದ್ಧ ವಿಮಾನ (LCA) ಸ್ಕ್ವಾರ್ಡನ್​ನಲ್ಲಿ ಪೈಲಟ್ ಆಗಿದ್ದರು. ಅವರಿಗೆ ಭಾರತದ ಸಶಸ್ತ್ರಪಡೆಗಳಿಗೆ ಶಾಂತಿಕಾಲದಲ್ಲಿ ನೀಡುವ ಮೂರನೇ ಅತ್ಯುನ್ನತ ಗೌರವವಾದ ಶೌರ್ಯಚಕ್ರ ನೀಡಿ ಪುರಸ್ಕರಿಸಲಾಗಿತ್ತು. ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಅಕ್ಟೋಬರ್ 12, 2020ರಂದು ಎಲ್​ಸಿಎ ತೇಜಸ್​ನಲ್ಲಿ ಹಾರಾಟ ನಡೆಸುತ್ತಿದ್ದ ವರುಣ್ ಸಿಂಗ್ ತಮ್ಮ ನೆಲೆಯಿಂದ ಬಹುದೂರದಲ್ಲಿದ್ದರು. ವಿಮಾನದ ನಿಯಂತ್ರಣ ವ್ಯವಸ್ಥೆ ಮತ್ತು ಒತ್ತಡ ನಿರ್ವಹಣೆ ವ್ಯವಸ್ಥೆಗಳಲ್ಲಿ ದೋಷ ಕಾಣಿಸಿಕೊಂಡಿತ್ತು. ವಿಮಾನವು ಎತ್ತರದಲ್ಲಿದ್ದಾಗ ಕಾಕ್​ಪಿಟ್​ನಲ್ಲಿ ಒತ್ತಡ ವೈಫಲ್ಯ ಕಂಡುಬಂದಿತ್ತು.
ತಾಂತ್ರಿಕ ಲೋಪವನ್ನು ಸಮರ್ಥವಾಗಿ ಗುರುತಿಸಿ ವಿಮಾನದ ಎತ್ತರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಾಗ ವಿಮಾನದ ನಿಯಂತ್ರಣ ವ್ಯವಸ್ಥೆ ವಿಫಲವಾಗಿ, ವಿಮಾನವು ಪೈಲಟ್​ನ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಅತ್ಯಂತ ಚಾಕಚಕ್ಯತೆ ಮತ್ತು ಜಾಣತನದಿಂದ ಪರಿಸ್ಥಿತಿ ನಿಭಾಯಿಸಿದ ವಿಕ್ರಮ್ ಸಿಂಗ್, ವಿಮಾನ ಕಾಪಾಡಿಕೊಂಡಿದ್ದರು. ಇಂಥ ಸಂದರ್ಭದಲ್ಲಿ ವಿಮಾನ ಇದ್ದಕ್ಕಿದ್ದಂತೆ ಮೇಲೇರುವುದು-ಕೆಳಗಿಳಿಯುವುದು ಸಾಮಾನ್ಯ. ಇದು ಪೈಲಟ್​ಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ದೊಡ್ಡಸವಾಲು ತಂದೊಡ್ಡುತ್ತದೆ.
ಒಮ್ಮೆ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೂ, ಮತ್ತೊಮ್ಮೆ 10,000 ಅಡಿಗಳಷ್ಟು ಎತ್ತರದಲ್ಲಿ ವಿಮಾನ ಸಂಪೂರ್ಣವಾಗಿ ನಿಯಂತ್ರಣ ತಪ್ಪಿದ ಅನುಭವವಾಯಿತು. ವಿಮಾನವು ಹೇಗೆಂದರೆ ಹಾಗೆ ಹೊರಳಲು ಶುರುಮಾಡಿತು. ಇಂಥ ಸಂದರ್ಭಗಳಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಪೈಲಟ್​ಗಳಿಗೆ ವಿಮಾನದಿಂದ ಹೊರಜಿಗಿಯಲು ಅನುಮತಿಯಿದೆ. ತನ್ನ ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದ ವಿಕ್ರಮ್ ಸಿಂಗ್, ಅಪರೂಪದ ಧೈರ್ಯ ಮತ್ತು ಕೌಶಲಗಳನ್ನು ಪ್ರದರ್ಶಿಸಿದರು. ಯುದ್ಧವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement