ಮೊಸರು ತರಲು ಮಾರ್ಗಮಧ್ಯೆ ರೈಲು ನಿಲ್ಲಿಸಿದ ಚಾಲಕ ಸಿಬ್ಬಂದಿ..!…ವಿಡಿಯೋ ವೈರಲ್‌ ಆದ ನಂತರ ಅಮಾನತು..ವೀಕ್ಷಿಸಿ

ಲಾಹೋರ್: ಸಾಮಾನ್ಯವಾಗಿ ಬಸ್​, ಲಾರಿ ಡ್ರೈವರ್​​ಗಳು ಊಟಕ್ಕೆಂದು ಹೋಟೆಲ್​ ಬಳಿ ವಾಹನ ನಿಲ್ಲಿಸಿ ಊಟ ಮಾಡುತ್ತಾರೆ ಅಥವಾ ಪಾರ್ಸಲ್ ಕಟ್ಟಿಸಿಕೊಳ್ಳುತ್ತಾರೆ. ಬಸ್ ಚಾಲಕರು ಕೆಲಕಾಲ ಬಸ್​ ನಿಲ್ಲಿಸಿದರೂ ಅದರ ಪ್ರಯಾಣಿಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ರೈಲು ಚಾಲಕ ಈ ರೀತಿ ತನಗೆ ಬೇಕಾದ ಕಡೆ ರೈಲು ನಿಲ್ಲಿಸಲು ಸಾಧ್ಯವಿಲ್ಲ. ಯಾಕೆಂದರೆ ಒಂದೇ ಹಳಿಯ ಮೇಲೆಯೇ ಬೇರೆ ಬೇರೆ ರೈಲುಗಳು ಚಲಿಸಬೇಕಾಗಿರುವುದರಿಂದ ಸ್ವಲ್ಪ ಅದು ಮಾಹಿತಿಯಿಲ್ಲದೆ ನಿಲುಗಡೆಯಾದರೆ ಅದರ ಚಲನೆ ವಿಳಂಬವಾಗಿ ಮತ್ತೊಂದು ರೈಲು ಅದೇ ಮಾರ್ಗದಲ್ಲಿ ಬಂದು ಡಿಕ್ಕಿ ಸಂಭವಿಸಬಹುದು. ಹೀಗಾಗಿ ರೈಲ ತುರ್ತು ಸಂದರ್ಭ ಹೊರತುಪಡಿಸಿ ರೈಲು ನಿಗದಿತ ನಿಲ್ದಾಣವನ್ನು ಹೊರತುಪಡಿಸಿ ಬೇರೆಡೆ ಮುನ್ಸೂಚನೆ ಇಲ್ಲದೆ ನಿಲ್ಲುವಂತಿಲ್ಲ. ಯಾರಾದರೂ ಚೈನ್ ಎಳೆದು ರೈಲನ್ನು ತುರ್ತಾಗಿ ನಿಲ್ಲಿಸಿದರೂ ಅದಕ್ಕೆ ಅಷ್ಟೇ ಗಂಭೀರವಾದ ಕಾರಣವಿಲ್ಲದಿದ್ದರೆ ಅವರಿಗೆ ದಂಡ ವಿಧಿಸಬಹುದು, ಜೈಲಿಗೂ ಹಾಕಬಹುದು.
ಆದರೆ ಲಾಹೋರ್‌ನ ರೈಲ್ವೇ ನಿಲ್ದಾಣಕ್ಕೂ ಮೊದಲು ಬಸ್‌ ನಿಲ್ಲಿಸಿದ ರೀತಿಯಲ್ಲಿ ಮೊಸರು ಖರೀದಿಸಲು ಪಾಕಿಸ್ತಾನದ ರೈಲು ಚಾಲಕ ಮತ್ತು ಅವರ ಸಹಾಯಕ ರೈಲನ್ನು ನಿಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ರೈಲು ಚಾಲಕನ ಸಹಾಯಕನು ಮೊಸರು ಪ್ಯಾಕೆಟ್ ಹಿಡಿದು ರೈಲಿನತ್ತ ವಾಪಸ್ ಬಂದು ನಿಂತ ರೈಲು ಏರುವುದನ್ನು ಹಾಗೂ ಆತ ಏರಿದ ನಂತರ ರೈಲು ಹೊರಡುವುದನ್ನು ನೋಡಬಹುದು.
ರೈಲನ್ನು ನಿಲ್ಲಿಸಿ, ಮೊಸರು ತಂದ ಇಬ್ಬರು ರೈಲ್ವೆ ಸಿಬ್ಬಂದಿಯನ್ನು ರಾಣಾ ಮೊಹಮ್ಮದ್ ಶೆಹಜಾದ್ ಮತ್ತು ಆತನ ಸಹಾಯಕ ಇಫ್ತಿಕರ್ ಹುಸೇನ್ ಎಂದು ಗುರುತಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ ರೈಲ್ವೆ ಸಚಿವ ಅಜಂ ಖಾನ್ ಸ್ವಾತಿ ಆ ಚಾಲಕ ಮತ್ತು ಆತನ ಸಹಾಯಕನನ್ನು ಅಮಾನತುಗೊಳಿಸಿದ್ದಾರೆ.ಈ ಘಟನೆಯು ಪಾಕಿಸ್ತಾನದಲ್ಲಿ ರೈಲ್ವೆಯ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ಚಾಲಕರ ನಿರ್ಲಕ್ಷ್ಯದಿಂದ ರೈಲು ಅಪಘಾತಗಳು ಸಾಮಾನ್ಯವಾಗಿದೆ. ಈಗ ಮನಬಂದಂತೆ ರೈಲನ್ನು ನಿಲ್ಲಿಸಿರುವುದು ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರೈಲನ್ನು ಹಳಿಗಳ ಮಧ್ಯದಲ್ಲಿ ಮನಬಂದಂತೆ ನಿಲ್ಲಿಸಿದಾಗ ಅದರಿಂದ ಸುರಕ್ಷತೆಯ ಸಮಸ್ಯೆಯಾಗುತ್ತದೆ. ಸುರಕ್ಷತೆಗೆ ಧಕ್ಕೆ ತರುವ ಯಾವುದನ್ನೂ ನಾವು ಸಹಿಸುವುದಿಲ್ಲ ಎಂದು ಪಾಕಿಸ್ತಾನದ ರೈಲ್ವೆ ಸಚಿವಾಲಯದ ವಕ್ತಾರ ಸೈಯದ್ ಇಜಾಜ್-ಉಲ್-ಹಸನ್ ಶಾ ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement