ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಕೈಬಿಡಲು ಒತ್ತಾಯಿಸಿ ಡಿಸೆಂಬರ್‌ 20 ರಂದು ಸುವರ್ಣಸೌಧ ಚಲೋ

ಹುಬ್ಬಳ್ಳಿ: ಶಾಲೆಗಳಲ್ಲಿ ಮತ್ತು ಅಂಗನವಾಡಿಯಲ್ಲಿ ಮೊಟ್ಟೆಗೆ ಬದಲಾಗಿ ಸತ್ವಯುತ-ಸರ್ವಸಮ್ಮತ ಸಸ್ಯಾಹಾರ ಪದಾರ್ಥ ನೀಡಬೇಕು ಎಂದು ಅಖಿಲ ಭಾರತ ಸಸ್ಯಹಾರಿ ಒಕ್ಕೂಟದ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಇಂದು, ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮತ್ತು ಅಂಗನವಾಡಿಗಳಲ್ಲಿನ ಮಕ್ಕಳಿಗೆ – ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಹೆಸರಿನಲ್ಲಿ ಸರ್ಕಾರ ಮೊಟ್ಟೆ ತಿನ್ನಿಸುತ್ತಿರುವುದನ್ನು ಕೈಬಿಟ್ಟು, ಬಹುಪೋಷಕಾಂಶಗಳನ್ನೊಳಗೊಂಡ ಶುದ್ಧ ಸಸ್ಯಾಹಾರ ಪದಾರ್ಥಗಳನ್ನು ನೀಡಲು ಮನವಿ ಮಾಡಿದರು.
ಮೊಟ್ಟೆ ಮುಕ್ತಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೇ ರಾಜ್ಯದ ಲಿಂಗಾಯತರು, ಜೈನರು, ಬ್ರಾಹ್ಮಣರು, ವೈಶ್ಯರು ಸೇರಿದಂತೆ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ಮತ್ತು ಅಂಗನವಾಡಿಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಬೆಳಗಾವಿ  ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಡಿಸೆಂಬರ್‌ 20 ರಂದು ಬೆಳಗ್ಗೆ 10ಕ್ಕೆ ಸಂತ ಸಮಾವೇಶ ಮತ್ತು ವಿಧಾನಸೌಧ ಚಲೋ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಏಕರೂಪತೆ ಪಡೆದುಕೊಳ್ಳಬೇಕಿದ್ದ ಸರ್ಕಾರ ಈ ರೀತಿ ಮಾಡಬಾರದು. ಮೌಲ್ಯ ಆಧಾರಿತ ಶಿಕ್ಷಣ ಕೊಡಿ, ಮೊಟ್ಟೆ ಅಲ್ಲ. ಕಾಂಗ್ರೆಸ್, ಜೆಡಿಎಸ್ ತೆಗೆದಿರುವ ಈ ಯೋಜನೆಯನ್ನ ಬಿಜೆಪಿ ಏಕೆ ತಂದಿದೆ? ಸಾಮರಸ್ಯ ಬಗ್ಗೆ ಸಾರಿ ಹೇಳುವ, ಆರ್ ಎಸ್ ಎಸ್ ಇದರ ಬಗ್ಗೆ ಏಕೆ ಮಾತಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಆರ್ ಎಸ್ ಎಸ್ ಮಾತನಾಡದಿದ್ದರೆ ನಾವು ಸಸ್ಯಾಹಾರಿಗಳು ಮುಂದೆಂದು ಅವರ ಮಾತು ಕೇಳುವುದಿಲ್ಲ. ರಾಜ್ಯದ ನೂರಾರು ಶ್ರೀಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆರ್‌ಎಸ್‌ಎಸ್‌ ಈ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರ ಸ್ವಾಮಿಗಳಿಂದಲೇ ಮೊಟ್ಟೆ ತಿನ್ನಿಸುವ ಹುನ್ನಾರ ಮಾಡುತ್ತಿದೆ. ಎಲ್ಲ ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಚನ್ನಬಸವನಂದ ಸ್ವಾಮೀಜಿ, ಭವರಲಾಲ್ ಜೈನ್, ರಮೇಶ್ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement