ಐಎಎಫ್ ಶೋಧ ತಂಡದಿಂದ ಪತನಗೊಂಡ ಹೆಲಿಕಾಪ್ಟರ್‌ ಬ್ಯ್ಲಾಕ್‍ ಬಾಕ್ಸ್ ​ಕೊನೆಗೂ ಪತ್ತೆ:ಇದರಲ್ಲಿ ತಿಳಿಯಲಿದೆ ದುರಂತಕ್ಕೆ ಕಾರಣ

ನವದೆಹಲಿ: ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಫ್ಲೈಟ್​ ರೆಕಾರ್ಡರ್​ ಎಂದು ಕರೆಯುವ ಬ್ಯ್ಲಾಕ್‍ ಬಾಕ್ಸ್​ ಕೊನೆಗೂ ಪತ್ತೆಯಾಗಿದೆ. ಹೆಲಿಕಾಪ್ಟರ್​ ಪತನವಾಗುವುದಕ್ಕೂ ಮೊದಲು ಏನಾಯಿತು ಎಂಬುದು ಇದರಿಂದ ಗೊತ್ತಾಗಲಿದೆ.

ಸೇನಾ ಸಿಬ್ಬಂದಿ ಪಡೆ ಮುಖ್ಯಸ್ಥ (ಸಿಡಿಎಸ್‌)​ ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ಎಂಐ 17ವಿ5 ಸೇನಾ ಹೆಲಿಕಾಪ್ಟರ್​​ ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಪತನವಾಗಿ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್​ ಮತ್ತು ಉಳಿದ 11 ಸೇನಾಧಿಕಾರಿಗಳು ದುರ್ಮರಣಕ್ಕೀಡಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಅಲ್ಲಿಗೆ ಹಿರಿಯ ಸೇನಾ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹೆಲಿಕಾಪ್ಟರ್​ ಪತನಕ್ಕೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹವಾಮಾನವೋ, ತಾಂತ್ರಿಕ ದೋಷವೋ ಅಥವಾ ಪೈಲಟ್​ ನಿರ್ಲಕ್ಷ್ಯವೋ ಎಂಬುದು ತನಿಖೆಯ ನಂತರ ಗೊತ್ತಾಗಬೇಕಿದೆ. ಅದನ್ನು ತಿಳಿಯಲು ಹೆಲಿಕಾಪ್ಟರ್​​ನ ಬ್ಲ್ಯಾಕ್ಸ್ ಬಾಕ್ಸ್ ಸಿಗಬೇಕಿತ್ತು. ನಿನ್ನೆಯಿಂದಲೂತನಿಖಾಧಿಕಾರಿಗಳು ಈ ಬ್ಲ್ಯಾಕ್​ ಬಾಕ್ಸ್​ಗಾಗಿ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಇಂದು, ಗುರುವಾರ ಬ್ಲ್ಯಾಕ್​ ಬಾಕ್ಸ್ ಪತ್ತೆಯಾಗಿದೆ. ಈ ಬಾಕ್ಸ್​ಗೆ ಫ್ಲೈಟ್​ ರೆಕಾರ್ಡರ್​ ಎಂದೂ ಕರೆಯುತ್ತಾರೆ.
ತಮಿಳುನಾಡಿನ ಕೂನೂರಿನ ಬಳಿಯ ಕಟ್ಟೇರಿ ಎಂಬ ಗ್ರಾಮದಲ್ಲಿ ಹೆಲಿಕಾಪ್ಟರ್​ ಪತನಗೊಂಡಿದೆ. ಸೇನೆಯ ಉನ್ನತ ಅಧಿಕಾರಿಗಳು ಪ್ರಯಾಣ ಮಾಡುವ ಹೆಲಿಕಾಪ್ಟರ್​​ಗಳನ್ನು ತುಂಬ ಜಾಗರೂಕತೆಯಿಂದ ಮೊದಲೇ ತಪಾಸಣೆ ಮಾಡಲಾಗುತ್ತದೆ. ಹವಾಮಾನದಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದರೂ, ಉನ್ನತಾಧಿಕಾರಿಗಳು ಪ್ರಯಾಣ ಮಾಡುವುದಕ್ಕೂ ಮೊದಲು ಇನ್ನೊಂದು ಹೆಲಿಕಾಪ್ಟರ್​ ಆ ಮಾರ್ಗದಲ್ಲಿ ಹೋಗಿ ಚೆಕ್​ ಮಾಡುತ್ತದೆ. ಅಂಥದ್ದರಲ್ಲಿ ಸಿಡಿಎಸ್​ ಸೇರಿ ಇತರ 11 ಪ್ರಮುಖ ಅಧಿಕಾರಿಗಳು ಇದ್ದ ಹೆಲಿಕಾಪ್ಟರ್​ ಪತನವಾಗಿದೆ. ಹೀಗಾಗಿ ಇದಕ್ಕೆ ಕಾರಣ ಹುಡುಕಲು ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಬೇಕಿತ್ತು. ಇಂದು ತನಿಖಾಧಿಕಾರಿಗಳು ತಮ್ಮ ಹುಡುಕಾಟದ ವ್ಯಾಪ್ತಿಯನ್ನು ಘಟನಾ ಸ್ಥಳಕ್ಕಿಂತಲೂ ಒಂದು ಕಿಮೀ ದೂರದವರೆಗೆ ವಿಸ್ತರಿಸಿದ ನಂತರ ಬ್ಲ್ಯಾಕ್​ ಬಾಕ್ಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಏಷ್ಯನ್‌ ಗೇಮ್ಸ್‌ 2026 : ಬಿಲ್ಲುಗಾರಿಕೆಯಲ್ಲಿ 2, ಮಹಿಳಾ ರಿಲೇ ಓಟದಲ್ಲಿ 1 ಚಿನ್ನದ ಪದಕ ಗೆದ್ದ ಭಾರತ

ಏನಿದು ಬ್ಲ್ಯಾಕ್​ ಬಾಕ್ಸ್?
ಬ್ಲ್ಯಾಕ್​ ಬಾಕ್ಸ್ ಒಂದು ಉಪಕರಣವಾಗಿದ್ದು, ಇದನ್ನು ಏರ್​ಕ್ರಾಫ್ಟ್​​ನಲ್ಲಿ ಅಳವಡಿಸಲಾಗುತ್ತದೆ. ಹೀಗೆ ಅಪಘಾತಗಳಾದಾಗ ತನಿಖೆಗೆ ಸಹಕಾರವಾಗಲಿ ಎಂಬ ದೃಷ್ಟಿಯಿಂದಲೇ ಇದನ್ನು ಅಳವಡಿಸಲಾಗುತ್ತದೆ. ಇದು ಹಾರ್ಡ್ ​ಡಿಸ್ಕ್​ ಮಾದರಿಯ ಉಪಕರಣವಾಗಿದ್ದು, ಫ್ಲೈಟ್​ಗೆ ಸಂಬಂಧಪಟ್ಟ ಎಲ್ಲ ಡಾಟಾಗಳು, ಕಾಕ್​ಪಿಟ್​​ನಲ್ಲಿ ನಡೆಯುವ ಮಾತುಕತೆಗಳನ್ನು ಇದು ರೆಕಾರ್ಡ್ ಮಾಡುತ್ತದೆ. ಸ್ವಯಂ ಚಾಲಿತ ಕಂಪ್ಯೂಟರ್​ ಪ್ರಕಟಣೆಗಳು, ರೇಡಿಯೋ ಟ್ರಾಫಿಕ್​​, ಪ್ರಯಾಣಿಕರು, ಸಿಬ್ಬಂದಿಯ ಮಾತುಕತೆ, ಇಬ್ಬರು ಪೈಲಟ್​ಗಳ ನಡುವಿನ ಮಾತುಕತೆ, ಪ್ರಕಟಣಾ ಮಾಹಿತಿ ಇತ್ಯಾದಿಗಳು ಇದರಲ್ಲಿ ರೆಕಾರ್ಡರ್​ ಆಗಿರುತ್ತದೆ.. ಹೀಗಾಗಿ ಹೆಲಿಕಾಪ್ಟರ್​ ಅಥವಾ ವಿಮಾನ ಪತನವಾದಾಗ ಮೊದಲು ಹುಡುಕುವುದು ಬ್ಲ್ಯಾಕ್​ಬಾಕ್ಸ್ ಅನ್ನು. ಈಗ ಪತ್ತೆಯಾದ ಬ್ಲ್ಯಾಕ್​ ಬಾಕ್ಸ್​ ಬಹಿರಂಗಪಡಿಸಲಿದೆ.
ಬ್ಲ್ಯಾಕ್​ ಬಾಕ್ಸ್​ ಈಗ ಕಡು ಕಿತ್ತಳೆ ಬಣ್ಣದಲ್ಲಿ ಇರುತ್ತದೆ. ಆದರೆ ಈ ಮೊದಲು ರೆಕಾರ್ಡರ್​ ಬಾಕ್ಸ್​ ಕಪ್ಪುಬಣ್ಣದಲ್ಲಿಯೇ ಇರುತ್ತಿತ್ತು. ಹಾಗಾಗಿ ಬ್ಲ್ಯಾಕ್​ ಬಾಕ್ಸ್​ ಎಂದು ಹೆಸರು ಬಂತು. ಇದು ಹೆಚ್ಚಿನ ತಾಪಮಾನ, ತುಕ್ಕು ನಿರೋಧಕವಾಗಿದ್ದು, ಸ್ಟೇನ್​ಲೆಸ್​ ಸ್ಟೀಲ್​​​ ಕಂಟೇನರ್​​ನಲ್ಲಿ ಎರಡು ಹೊದಿಕೆಯಲ್ಲಿ ಸುತ್ತಿಡಲಾಗುತ್ತದೆ. ಈ ಕಪ್ಪು ಪೆಟ್ಟಿಗೆಗಳು ಬರೀ ಭೂಮಿ ಮೇಲೆ ಬಿದ್ದರಷ್ಟೇ ಅಲ್ಲ, ಸಮುದ್ರದಲ್ಲಿ ಬಿದ್ದರೂ ಹಾಳಾಗದಂತೆ ಇದನ್ನು ವಿನ್ಯಾಸಗೊಳಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ ಪ್ರಕರಣದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಹಾಶಿಮ್ ಮೂಸಾನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement