ಕಾರ್ಮಿಕ ಇಲಾಖೆಯಿಂದ ಶ್ರಮಿಕ ವರ್ಗಕ್ಕೆ ಭರ್ಜರಿ ಗಿಫ್ಟ್: ರಾಜ್ಯಾದ್ಯಂತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಯೋಜನೆ

ಬೆಂಗಳೂರು: ರಾಜ್ಯದ ಕಾರ್ಮಿಕ ಇಲಾಖೆ ಈಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿ ತರಲು ಹೊರಟಿದೆ.
ಕಾರ್ಮಿಕ ಇಲಾಖೆ ಈಗ ಕಾರ್ಮಿಕರು ತಮ್ಮ ಕೆಲಸದ ಪ್ರದೇಶಗಳಿಗೆ ತೆರಳಲು ಅನುವಾಗುವಂತೆ ಉಚಿತ ಸಾರಿಗೆ ಸೇವೆ ಒದಗಿಸಲು ನಿರ್ಧರಿಸಿದೆ.
ಬೆಂಗಳೂರು ಮಹಾನಗರದಲ್ಲಿ ಈಗಾಗಲೇ ಈ ಉಚಿತ ಸೇವೆ ಜಾರಿ ಮಾಡಿರುವ ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿ ಈಗ ಈ ಯೋಜನೆ ರಾಜ್ಯದಾದ್ಯಂತ ವಿಸ್ತರಿಸಲು ನಿರ್ಧರಿಸಿದೆ.
ಬಿಎಂಟಿಸಿಯಿಂದ ಜಾರಿ
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ಪ್ರಯತ್ನ ಫಲವಾಗಿ ಈ ಸಂಬಂಧ ಸಾರಿಗೆ ಇಲಾಖೆ ಜತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗಾಗಲೇ ಈ ಯೋಜನೆ ಜಾರಿಗೊಳಿಸಿದೆ.
ದಿನ ನಿತ್ಯ ಕೂಲಿಗಾಗಿ ತೆರಳುವ ಕಟ್ಟಡ ಕಾರ್ಮಿಕರು ಪ್ರತಿನಿತ್ಯ ಅವರು ಕೆಲಸ ನಿರ್ವಹಣೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಕನಿಷ್ಠ 150 ರಿಂದ 200 ರೂ. ವ್ಯಯಿಸಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡ ಸಚಿವ ಶಿವರಾಂ ಹೆಬ್ಬಾರ್, ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆಯ ಯೋಜನೆಗೆ ಚಾಲನೆ ನೀಡಿದರು.
ಕಾರ್ಮಿಕ ಕಲ್ಯಾಣ ಮಂಡಳಿಯ ನೊಂದಾಯಿತ ಕಾರ್ಮಿಕರು ಈ ಯೋಜನೆ ಲಾಭ ಪಡೆಯಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ವಿಸ್ತರಣೆಗೆ ನಿರ್ಧಾರ:
ಬೆಂಗಳೂರು ಮಹಾನಗರದಲ್ಲಿ ಜಾರಿಯಾಗಿರುವ ಉಚಿತ ಸಾರಿಗೆ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮುಂದಡಿ ಇರಿಸಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ, ಕೆಎಸ್‌ಆರ್‌ಟಿಸಿ, ಈಶಾನ್ಯ, ವಾಯವ್ಯ ಸಾರಿಗೆ ಹೀಗೆ ಎಲ್ಲ ಸಾರಿಗೆ ಸಂಸ್ಥೆಗಳೊಂದಿಗೆ ಯೋಜನೆ ತ್ವರಿತ ಜಾರಿಗೆ ಸಂಬಂಧ ಮಹತ್ವದ ಸಭೆಗಳನ್ನು ನಡೆಸಲಾಗಿದೆ.
ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಬಸ್ ಸೇವೆ ಜಾರಿಗೆ ಕಾರ್ಮಿಕ ಇಲಾಖೆ ಶೇ.80ರಷ್ಟು ತಾನು ಭರಿಸುವ ಭರವಸೆ ನೀಡಿತ್ತಲ್ಲದೆ, ಇನ್ನುಳಿದ ಶೇ.20ರಷ್ಟು ರಿಯಾಯ್ತಿ ನೀಡುವುದು ಅಥವಾ ಸಾರಿಗೆ ಇಲಾಖೆಯೇ ಭರಿಸುವ ಪ್ರಸ್ತಾವನೆ ಇರಿಸಿತ್ತು.
ಆರಂಭಿಕ ಹಂತದಲ್ಲಿ ಈ ಪ್ರಸ್ತಾವನೆಗೆ ಮೌಖಿಕ ಸಮ್ಮತಿ ಸೂಚಿಸಿದ್ದ ಸಾರಿಗೆ ಇಲಾಖೆ ಈಗ “ತನ್ನ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಶೇ.20 ರಿಯಾಯ್ತಿ ಅಥವಾ ತಾನು ಭರಿಸುವುದು ಅಸಾಧ್ಯ” ಎಂದು ತಿಳಿಸಿದೆ. ಆದರೂ ಈ ಯೋಜನೆ ಅನುಷ್ಠಾನಕ್ಕೆ ನಿರ್ಧಾರ ಕೈಗೊಂಡಿರುವ ಕಾರ್ಮಿಕ ಸಚಿವರು, ಶೇ.100ರಷ್ಟು ಮೊತ್ತ ಪಾವತಿಸಿಯಾದರೂ ಯೋಜನೆಯನ್ನು ರಾಜ್ಯದಾದ್ಯಂತ ಜಾರಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರವೇ ರಾಜ್ಯದಾದ್ಯಂತ ಶ್ರಮಿಕ ವರ್ಗಕ್ಕೆ ಉಚಿತ ಬಸ್ ಪಾಸ್ ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಯಾಗಲಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

ಬಿಎಂಟಿಸಿ ಉಚಿತ ಪಾಸ್ ಪಡೆಯುವುದು ಹೇಗೆ?

ಅರ್ಹತೆ
* ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ನೊಂದಾಯಿಸಿಕೊಂಡಿರಬೇಕು.
* ಮಂಡಳಿ ಗುರುತಿನ ಚೀಟಿ
* ಎರಡು ಸ್ಟಾಂಪ್ ಅಳತೆಯ ಭಾವಚಿತ್ರ
* ಆಧಾರ್ ಕಾರ್ಡ್ ಪ್ರತಿ

ಎಲ್ಲೆಲ್ಲಿ ಲಭ್ಯ..?
ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ವೈಟ್‌ಫೀಲ್ಡ್ ಟಿಟಿಎಂಸಿ, ಯಶವಂತಪುರ, ಬನಶಂಕರಿ, ವಿಜಯನಗರ, ಶಾಂತಿನಗರ, ದೊಮ್ಮಲೂರು, ಕೋರಮಂಗಲ ಬಿಎಂಟಿಸಿ ಘಟಕಗಳು, ಕೆಂಗೇರಿ ಟಿಟಿಎಂಸಿ, ಯಲಹಂಕ ಹಳೆಯ ಬಸ್ ನಿಲ್ದಾಣ, ಹೊಸಕೋಟೆ ಬಸ್ ನಿಲ್ದಾಣ, ಸುಮನಹಳ್ಳಿ ಡಿಪೋ, ಕೆ.ಆರ್.ಪುರ, ಹೆಚ್‌ಎಸ್‌ಆರ್ ಲೇಔಟ್, ಹೆಬ್ಬಾಳ ಬಿಎಂಟಿಸಿ ಘಟಕಗಳು, ನಾಗಮಂಗಲ ಡಿಪೋ, ಬಾಗಲಗುಂಟೆಯಲ್ಲಿ ಕಾರ್ಮಿಕ ಇಲಾಖೆ, ಡೈರಿ ಸರ್ಕಲ್ ಬಳಿಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿಗಳನ್ನು ದಾಖಲೆಗಳನ್ನು ಸಲ್ಲಿಸಿ ಪಾಸ್‌ಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement