ಮಹಾರಾಷ್ಟ್ರದಲ್ಲಿ ಒಂದೇ ದಿನ 7 ಓಮಿಕ್ರಾನ್​ ಸೋಂಕು ದೃಢ; ಮುಂಬೈನಲ್ಲಿ 144 ಸೆಕ್ಷನ್​ ಜಾರಿ

ಮುಂಬೈ: ದೇಶದಲ್ಲಿ ಓಮಿಕ್ರಾನ್​ ಪ್ರಕರಣಗಳು ಹೆಚ್ಚುತ್ತಿವೆ. ಮಹಾರಾಷ್ಟ್ರದಲ್ಲಿ ನಿನ್ನೆ ಶುಕ್ರವಾರ ಮತ್ತೆ ಏಳು ಪ್ರಕರಣಗಳು ಪತ್ತೆಯಾಗಿದ್ದು, ಇಂದು, ಶನಿವಾರ ದೆಹಲಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಈಗ 33ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲೇ 17ಕ್ಕೆ ಏರಿಕೆಯಾಗಿದೆ.
ಓಮಿಕ್ರಾನ್ ಸೋಂಕು ಹೆಚ್ಚಾದ ಬೆನ್ನಲ್ಲೇ ಮುಂಬೈನಲ್ಲಿ ಇಂದು ಮತ್ತು ನಾಳೆ (ಡಿ.11 ಮತ್ತು 12ರಂದು) ಸೆಕ್ಷನ್​ 144 ಜಾರಿ ಮಾಡಲಾಗಿದೆ. ಮುಂಬೈನಲ್ಲಿ ರ್ಯಲಿಗಳು, ಮೆರವಣಿಗೆಗಳು ಮತ್ತಿತರ ರೀತಿಯ ಗುಂಪುಗೂಡುವಿಕೆಯನ್ನು ನಿಷೇಧಿಸಲಾಗಿದ್ದು, ಓಮಿಕ್ರಾನ್​ ಇನ್ನಷ್ಟು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಿಧಿಸಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೊರೊನಾ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್ ಭಾರತ ಸೇರಿ 59ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ನಮ್ಮ ದೇಶದಲ್ಲೂ ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ 9, ಗುಜರಾತ್​​ನಲ್ಲಿ 3​, ಕರ್ನಾಟಕದಲ್ಲಿ 2 ಮತ್ತು ದೆಹಲಿಯಲ್ಲಿ 2 ಪ್ರಕರಣಗಳು ದಾಖಲಾಗಿದೆ. ದೇಶದಲ್ಲಿ ಒಟ್ಟು 33 ಮಂದಿಯಲ್ಲಿ ಒಮಿಕ್ರಾನ್​ ದೃಢಪಟ್ಟಿದೆ. ಮಹಾರಾಷ್ಟ್ರದಲ್ಲೇ ಅರ್ಧಕ್ಕಿಂತ ಹೆಚ್ಚು ಕೇಸ್​​ಗಳಿವೆ. ನಿನ್ನೆ ಮೂರು ವರ್ಷದ ಮಗುವಲ್ಲೂ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ನಿನ್ನೆ ಪತ್ತೆಯಾದ ಏಳು ಕೇಸ್​ಗಳಲ್ಲಿ ಮೂರು ಪ್ರಕರಣಗಳು ಮುಂಬೈನಿಂದ ಮತ್ತು ನಾಲ್ಕು ಕೇಸ್​ಗಳು ಪಿಂಪ್ರಿಯ ಚಿಂಚವಾಡ ಮುನ್ಸಿಪಲ್ ಕಾರ್ಪೋರೇಶನ್​​ನಿಂದ ವರದಿಯಾಗಿದೆ. ಮುಂಬೈನಲ್ಲಿ ಸೋಂಕಿಗೆ ಒಳಗಾದವರು 48, 25 ಮತ್ತು 37ನೇ ವರ್ಷದ ಪುರುಷರು. ಇವರು ತಾಂಜೇನಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದವರು. ಏಳು ರೋಗಿಗಳಲ್ಲಿ ನಾಲ್ವರಿಗೆ ಈಗಾಗಲೇ ಕೊರೊನಾ ಲಸಿಕೆ ನೀಡಲಾಗಿದೆ. ಒಬ್ಬ ರೋಗಿಯು ಒಂದೇ ಡೋಸ್ ಲಸಿಕೆಯನ್ನು ಪಡೆದಿದ್ದರೆ ಒಬ್ಬ ರೋಗಿಗೆ ಲಸಿಕೆ ಹಾಕಲಾಗಿಲ್ಲ. ನಾಲ್ವರು ರೋಗಿಗಳಲ್ಲಿ ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ. ಮೂರು ರೋಗಿಗಳು ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಶೇ.30ರಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ: ಬಿಎಚ್‌ಯು ಅಧ್ಯಯನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement