ಸಿಡಿಎಸ್‌ ಬಿಪಿನ್ ರಾವತ್ ಸಾವಿನ ಸಂಭ್ರಮಾಚರಣೆ ವಿರೋಧಿಸಿ ಇಸ್ಲಾಂ ತೊರೆದ ಮಲಯಾಳಂ ನಿರ್ದೇಶಕ ಅಲಿ ಅಕ್ಬರ್: ಪತ್ನಿ ಸಮೇತ ಹಿಂದೂ ಧರ್ಮ ಸ್ವೀಕರಿಸಲು ನಿರ್ಧಾರ

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಸುದ್ದಿಗೆ ಕೆಲವು ಮುಸ್ಲಿಮರ ಅಗೌರವದ ಪ್ರತಿಕ್ರಿಯೆಯನ್ನು ಖಂಡಿಸಿರುವ ಕೇರಳದ ಚಲನಚಿತ್ರ ನಿರ್ಮಾಪಕ ಅಲಿ ಅಕ್ಬರ್ ಅವರು ತಾನು ಧರ್ಮದಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ ಮತ್ತು ತಮ್ಮ ಪತ್ನಿಯೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.
ಬಿಪಿನ್​ ರಾವತ್​ ಅವರ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಕಮೆಂಟ್​ ಮಾಡಿದ್ದನ್ನು ಖಂಡಿಸಿ ಅಲಿ ಅಕ್ಬರ್​ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನು ಕೈ ಬಿಡುವುದಾಗಿ ಅವರು ತಿಳಿಸಿದ್ದಾರೆ.

ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅಕ್ಬರ್ ಈ ಘೋಷಣೆ ಮಾಡಿದ್ದಾರೆ. ಈ ಹಿಂದೆ ವಿಡಿಯೋವೊಂದರಲ್ಲಿ ಅಲಿ ಅಕ್ಬರ್ ಅವರು ಜನರಲ್ ಬಿಪಿನ್ ರಾವತ್ ಅವರ ಸಾವಿನ ಕುರಿತು ಸಂಭ್ರಮಿಸಿ ಪೋಸ್ಟ್‌ ಮಾಡಿದವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ತಾನು ಧರ್ಮದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿರುವ ಅವರು ತಮ್ಮ ಪತ್ನಿ ಲೂಸಿಯಮ್ಮ ಅವರೊಂದಿಗೆ ಹಿಂದೂ ಧರ್ಮ ಸ್ವೀಕರಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಅಲಿ ಅಕ್ಬರ್ ಈಗ ರಾಮಸಿಂಹನ್ ಎಂದು ಹೆಸರು ಬದಲಾಯಿಸಿಕೊಳ್ಳಲು ಸಜ್ಜಾಗಿದ್ದಾರೆ – ಅವರು ಸ್ವತಃ ಆಯ್ಕೆ ಮಾಡಿಕೊಂಡ ಹೆಸರು ಇದಾಗಿದೆ. ಯಾಕೆಂದರೆ ರಾಮಸಿಂಹನ್ ತನ್ನ ಸಂಸ್ಕೃತಿ ಪರವಾಗಿ ನಿಂತಾಗ ಅವರು ಕೊಲ್ಲಲ್ಪಟ್ಟರು. ಈ ಕಾರಣಕ್ಕಾಗಿಯೇ ಆ ಹೆಸರೇ ಅವರಿಗೆ ಸೂಕ್ತ ಎಂದು ಅವರು ಹೇಳಿದ್ದಾರೆ.

ಜನರಲ್ ರಾವತ್ ಸಾವಿನ ಸುದ್ದಿಗೆ ಕೆಲವರು ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ ನಂತರ ಅಲಿ ಅಕ್ಬರ್ ತಮ್ಮ ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಯಾವುದೇ ಮುಸ್ಲಿಂ ಧಾರ್ಮಿಕ ಮುಖಂಡರು ಇಂತಹ ಪ್ರತಿಕ್ರಿಯೆಗಳನ್ನು ಖಂಡಿಸಲಿಲ್ಲ ಮತ್ತು ಇದು ಸಹ ತಾವು ಮತಾಂತರಗೊಳ್ಳಲು ನಿರ್ಧರಿಸಲು ಕಾರಣವಾದ ಅಂಶಗಳಲ್ಲಿ ಒಂದು ಎಂದು ಹೇಳಿದ್ದಾರೆ.
ಅವರು ತಮ್ಮ ಹೊಸ ಫೇಸ್‌ಬುಕ್‌ ಖಾತೆ ಮೂಲಕ ಈ ಘೋಷಣೆ ಮಾಡಿದ್ದಾರೆ. ಅಲ್ಲದೆ ತಮ್ಮ ಹೆಣ್ಣು ಮಕ್ಕಳನ್ನು ಧರ್ಮ ಬದಲಾಯಿಸುವಂತೆ ಒತ್ತಾಯಿಸುವುದಿಲ್ಲ, ಅದನ್ನು ಅವರ ಆಯ್ಕೆಗೆ ಬಿಡುವುದಾಗಿ ಹೇಳಿದ್ದಾರೆ.
ಅಲಿ ಅಕ್ಬರ್ ಅವರು ಈ ಹಿಂದೆ ಬಿಜೆಪಿಯ ರಾಜ್ಯ ಸಮಿತಿ ಸದಸ್ಯರಾಗಿದ್ದರು ಮತ್ತು ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಸ್ಥಾನವನ್ನು ತೊರೆದಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement