ನಾನು ಹಿಂದು, ಆದ್ರೆ ಹಿಂದುತ್ವವಾದಿ ಅಲ್ಲ ಎಂದ ರಾಹುಲ್ ಗಾಂಧಿ; ಜೈಪುರ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ

ಜೈಪುರ: ಭಾರತವು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳ ದೇಶವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ತೈಲ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ದರ ಏರಿಕೆ ಆಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಹರಿಹಾಯ್ದರು.
ಭಾರತದ ರಾಜಕೀಯದಲ್ಲಿ ಇಂದು ಎರಡು ಲೋಕಗಳ ನಡುವೆ ಪೈಪೋಟಿ ಇದೆ — ‘ಹಿಂದೂ’ ಮತ್ತು ‘ಹಿಂದುತ್ವವಾದಿ’. ಈ ಎರಡು ಪದಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ನಾನು ಹಿಂದೂ ಆದರೆ ಹಿಂದುತ್ವವಾದಿ ಅಲ್ಲ… ಮಹಾತ್ಮ ಗಾಂಧಿ ಹಿಂದೂ ಆದರೆ ಗೋಡ್ಸೆ ಹಿಂದುತ್ವವಾದಿ ಎಂದು ಹೇಳಿದರು.
ಬಿಜೆಪಿಯವರು ಹಿಂದುತ್ವದ ಹೆಸರಲ್ಲಿ ಅಧಿಕಾರದಲ್ಲಿ ಮುಂದುವರಿಯಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಹಿಂ ದೇಶ ಬೆಲೆ ಏರಿಕೆಯಿಂದ ನರಳುತ್ತಿರುವುದಕ್ಕೆ ಹಿಂದುತ್ವ ವಾದಿಗಳೇ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಹಿಂದುತ್ವ ವಾದಿಗಳು ಅಧಿಕಾರದಲ್ಲಿದ್ದರೂ ಏನೂ ಮಾಡದ ಕಾರಣಕ್ಕೆ ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದು ಹಿಂದೂಗಳ ದೇಶ, ಹಿಂದುತ್ವವಾದಿಗಳದ್ದಲ್ಲ. ದೇಶದಲ್ಲಿ ಹಣದುಬ್ಬರವಿದ್ದರೆ, ಸಂಕಟವಿದ್ದರೆ ಅದನ್ನು ಅಧಿಕಾರದಲ್ಲಿರುವ ಹಿಂದುವಾದಿಗಳು ಮಾಡಿದ್ದಾರೆ. ಹಿಂದುತ್ವವಾದಿಗಳು ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರವನ್ನು ಬಯಸುತ್ತಾರೆ” ಎಂದು ಏರುತ್ತಿರುವ ಹಣದುಬ್ಬರದ ವಿರುದ್ಧ ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಹೇಳಿದರು.
ಎನ್‌ಡಿಎ ಆಡಳಿತಾವಧಿಯಲ್ಲಿ ಅವರ ಸ್ನೇಹಿತರು ದೇಶವನ್ನು ಹಾಳು ಮಾಡಿದ್ದಾರೆ. ಪ್ರಧಾನಿ ಮೋದಿಯವರು ಮತ್ತು ಅವರ ಮೂರು-ನಾಲ್ಕು ಕೈಗಾರಿಕೋದ್ಯಮಿ ಸ್ನೇಹಿತರು ಏಳು ವರ್ಷಗಳಲ್ಲಿ ದೇಶವನ್ನು ಹಾಳುಮಾಡಿದ್ದಾರೆ” ಎಂದು ಆರೋಪಿಸಿದರು.
ಹಿಂದುತ್ವವಾದಿಗಳು ತಮ್ಮ ಇಡೀ ಜೀವನವನ್ನು ಅಧಿಕಾರದ ಹುಡುಕಾಟದಲ್ಲಿ ಕಳೆಯುತ್ತಾರೆ. ಅವರಿಗೆ ಅಧಿಕಾರದ ಹೊರತು ಬೇರೇನೂ ಬೇಕಾಗಿಲ್ಲ ಮತ್ತು ಅದಕ್ಕಾಗಿ ಏನು ಬೇಕಾದರೂ ಅವರು ಮಾಡುತ್ತಾರೆ. ಅವರು ‘ಸತ್ತಾಗ್ರಹ’ ಮಾರ್ಗವನ್ನು ಅನುಸರಿಸುತ್ತಾರೆ, ‘ಸತ್ಯಾಗ್ರಹ’ ಅಲ್ಲ. ಈ ದೇಶವು ಹಿಂದೂಗಳದ್ದು, ಹಿಂದುತ್ವವಾದಿಗಳದ್ದಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
ಹಿಂದುತ್ವವಾದಿಗಳಿಗೆ ಅಧಿಕಾರ ಮಾತ್ರ ಬೇಕು. ಆದರೆ “ನಾವು ಈ ಹಿಂದುತ್ವವಾದಿಗಳನ್ನು ಅಧಿಕಾರದಿಂದ ಹೊರಹಾಕಬೇಕು ಎಂದು ಅವರು ಹೇಳಿದರು.
ರ್ಯಾಲಿಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉಪಸ್ಥಿತರಿದ್ದರು. ರಾಜಸ್ಥಾನ ವಿಧಾನಸಭೆ ಚುನಾವಣೆ 2023ರಲ್ಲಿ ನಡೆಯಲಿದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement