ಡಿಸೆಂಬರ್‌ ೧೬ ರಂದು ಅನುದಾನಿತ-ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ನೌಕರರಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ

ಹುಬ್ಬಳ್ಳಿ: ಖಾಸಗಿ ಶಾಲೆಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಡಿಸೆಂಬರ್‌ ೧೬ ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದಿಂದ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ನೌಕರರಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ ತಿಳಿಸಿದ್ದಾರೆ.
ಕಳೆದ ದಶಕಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುತ್ತ ಬರಲಾಗಿದೆ. ಕಾಲಕಾಲಕ್ಕೆ ಅಂದಿನ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಭರವಸೆಗಳ ಮಹಾಪೂರವನ್ನೇ ಹರಿಸಿ ಹೋರಾಟವನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಾ ಬಂದಿದ್ದು ವಿಷಾದನೀಯ ಎಂದು ಅವರು ಹೇಳಿದ್ದಾರೆ.
ಕಳೆದ ಮಾರ್ಚನಲ್ಲಿ ಅಂದಿನ ಶಿಕ್ಷಣ ಸಚಿವರಾದ ಸುರೇಶಕುಮಾರ ಭರವಸೆಯ ಪತ್ರ ನೀಡಿ ಕಳೆದ ಮಾರ್ಚನಲ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ಘೋಷಿಸುವುದಾಗಿ ಅಂದು ಹೇಳಿದ್ದರು. ಅಂದಿನ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಅದಕ್ಕಿಂತಲೂ ಮುಂಚೆ ಧಾರವಾಡದಲ್ಲಿ ಕಳೆದ ಡಿಸೆಂಬರ್ ೦೫ರಿಂದ ೧೨ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹವನ್ನು ಅಂದಿನ ಮುಖ್ಯಮಂತ್ರಿ ಯಡಿಯರಪ್ಪನವರ ಭರವಸೆಯಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲರು ಹೋರಾಟದ ಸ್ಥಳಕ್ಕೆ ಆಗಮಿಸಿ ಮುಖ್ಯಮಂತ್ರಿಗಳು ನೀಡಿದ ಭರವಸೆ ಪತ್ರವನ್ನು ನೀಡಿ ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸಲು ಮನವಿ ಮಾಡಿದ್ದರು. ಆದರೆ ಇಲ್ಲಿಯವರೆಗೆ ಭರವಸೆಗಳು ಭರವಸೆಗಳಾಗಿಯೇ ಉಳಿದಿದ್ದು ಶಿಕ್ಷಕ ಸಮೂಹಕ್ಕೆ ಸಾಕಷ್ಟು ನೋವು ತಂದಿದೆ. ಸರಕಾರ ಮಾಡುವ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಕಳೆದ ಶತಮಾನಗಳಿಂದ ಸೇವೆ ಮಾಡುವ ಮೂಲಕ ಕನ್ನಡ ಶಾಲೆಗಳನ್ನು, ಕನ್ನಡ ಭಾಷೆಯನ್ನು ಉಳಿಸಿದ್ದಾರೆ. ಈಗ ಮತ್ತೆ ಸರಕಾರದ ಕಣ್ತೆರೆಸಲು ಹತ್ತು ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಡಿಸೆಂಬರ್‌ ೧೬ ರಂದು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಕಣ್ತೆರೆಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಜಿ.ಆರ್‌.ಭಟ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಈ ಕೆಳಕಂಡ ಪ್ರಮುಖ ಸಮಸ್ಯೆಗಳನ್ನು ಇಟ್ಟುಕೊಂಡು ಸರಕಾರದ ಕಣ್ತೆರಸಲು ನಮ್ಮ ಬೃಹತ್ ಪ್ರಮಾಣ ಹೋರಾಟ ಅಂದು ನಡೆಯಲಿದೆ.

: ಪ್ರಮುಖ ಬೇಡಿಕೆಗಳು :
 ೧೯೯೫ರ ನಂತರ ಆರಂಭವಾದ ಕನ್ನಡ ಮಾಧ್ಯಮಿಕ ಶಾಲೆಗಳಿಗೆ ಅನುದಾನ ವಿಸ್ತರಿಸುವುದು.
ಬಸವರಾಜ ಹೊರಟ್ಟಿಯವರು ನೀಡಿದ ಕಾಲ್ಪನಿಕ ವೇತನ ವರದಿ ಜಾರಿಗೊಳಿಸುವುದು.
ಖಾಸಗಿ ಶಾಲಾ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ವಿಸ್ತರಿಸುವುದು, ಎನ್.ಪಿ.ಎಸ್. ಬದಲು ಓ.ಪಿ.ಎಸ್.ಜಾರಿಗೊಳಿಸುವುದು.
 ಖಾಸಗಿ ಶಾಲೆ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸುವುದು.
 ಅನುದಾನ ರಹಿತ ಆಂಗ್ಲಮಾಧ್ಯಮ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ಜಾರಿಗೊಳಿಸುವುದು.
ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಆದ ನಷ್ಟ ಭರಿಸುವುದು, ನೇಮಕಾತಿಗೆ ನಿರ್ಭಂದಿಸಿದ ಆರ್ಥಿಕ ಮಿತವ್ಯಯ ಹಿಂಪಡೆಯುವುದು.
ದೈಹಿಕ ಶಿಕ್ಷಣ ಪರಿಷ್ಕರಣಾ ವರದಿಯಾದ ಡಾ.ಎಲ್.ಆರ್.ವೈದ್ಯನಾಥನ್ ವರದಿಯನ್ನು ಜಾರಿಗೊಳಿಸುವುದು.
 ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೂ ನೀಡುವುದು.
 ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಇರುವ ಕಠಿಣ ಅವೈಜ್ಞಾನಿಕ ನಿಯಮಗಳನ್ನು ಸಡಿಲಿಸುವುದು.
 ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ) ನಿಯಮಗಳನ್ನು ಪರಿಷ್ಕರಿಸುವುದು.
ಖಾಸಗಿ ಶಾಲಾ ನೌಕರರಿಗೆ ಕೋವಿಡ್ ಪ್ಯಾಕೇಜ ನೀಡವಲ್ಲಿ ಆದ ತಾರತಮ್ಯ ಸರಿಪಡಿಸುವುದು.

ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳಿಗೆ ಇದೇ ಅಧಿವೇಶನದಲ್ಲಿ ಪರಿಹಾರ ಒದಗಿಸುವಲ್ಲಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ನಿರ್ಧಾರ ಕೈಗೊಳ್ಳಬೇಕು ಹಾಗೂ ಸಾವಿರಾರು ಶಿಕ್ಷಕ ಕುಟುಂಬಗಳ ಹಿತ ಕಾಯುವಲ್ಲಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಮುಂದಾಗಬೇಕು ಎಂದು ಒತ್ತಾಯಿಸಲುಅಂದಿನ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸದಸ್ಯರು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಡಾ.ಬಸವರಾಜ ಧಾರವಾಡ, ಶ್ಯಾಮ ಮಲ್ಲನಗೌಡ್ರ, ಎಚ್.ಪಿ. ಬಣಕಾರ, ಎಸ್.ಎಂ.ಅಗಡಿ, ವ್ಹಿ.ಎಸ್.ಹುದ್ದಾರ, ನಾರಾಯಣ ದೈಮನೆ, ಪ್ರಭಾಕರ ಬಂಟ್, ಚಂದ್ರಶೇಖರ ಸಾವಳಗಿ, ಎಂ.ಡಿ.ನಂದೆಣ್ಣವರ, ಎಸ್.ಎಸ್.ಅಂಗಡಿ, ಎನ್.ಎನ್. ಸವಣೂರ ಮುಂತಾದವರು ವಿನಂತಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement