ವಿಧಾನ ಪರಿಷತ್ ಚುನಾವಣಾ ಫಲಿತಾಂಶ: ಬಿಜೆಪಿ-11, ಕಾಂಗ್ರೆಸ್‌- 11 ಜೆಡಿಎಸ್‌-2: ಯಾರ್ಯಾರು ಎಲ್ಲೆಲ್ಲಿ ಗೆದ್ದಿದ್ದಾರೆ.. ಮಾಹಿತಿ ಇಲ್ಲಿದೆ

ಬೆಂಗಳೂರು: 25 ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್​ ಚುನಾವಣೆಯ ಫಲಿತಾಂಶ ಇಂದು (ಡಿ.14) ಪ್ರಕಟವಾಗಿದ್ದು, ಬಿಜೆಪಿ 12, ಕಾಂಗ್ರೆಸ್‌ 11. ಜೆಡಿಎಸ್‌ 2 ಹಾಗೂ ಪಕ್ಷೇತರರು 1 ಸ್ಥಾನದಲ್ಲಿ ಜಯಗಳಿಸಿದ್ದಾರೆ.
12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ವಿಧಾನ ಪರಿಷತ್ತಿನಲ್ಲಿ ಬಹುಮತ ಪಡೆದುಕೊಂಡಿದ್ದು,.ಆಡಳಿತಾರೂಢ ಬಿಜೆಪಿಗೆ ಸಮಬಲ ಹೋರಾಟ ನೀಡಿದ ಕಾಂಗ್ರೆಸ್‌ 11ರಲ್ಲಿ ಗೆಲುವು ಸಾಧಿಸಿದೆ. ಇನ್ನು ಜೆಡಿಎಸ್ 1 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ.
ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್‍ನ 14, ಬಿಜೆಪಿಯ 6, ಜೆಡಿಎಸ್ 4, ಪಕ್ಷೇತರ ಒಂದು ಸ್ಥಾನ ಸೇರಿದಂತೆ 25 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದೀಗ ಬಿಜೆಪಿಯು 6ರಿಂದ 11 ಕ್ಕೆ ಹೆಚ್ಚಿಸಿಕೊಂಡಿದೆ , ಅಂದರೆ ಐದು ಸ್ಥಾನಗಳು ಹೆಚ್ಚಾಗಿದೆ. ಕಾಂಗ್ರೆಸ್ 14ರಿಂದ 11ಕ್ಕೆ ಕುಸಿದಿದೆ. ಹಾಗೂ ಜೆಡಿಎಸ್‌ 4 ರಿಂದ ಎರಡು ಸ್ಥಾನ ಕುಸಿದಿದೆ. ಆಡಳಿತಾರೂಢ ಬಿಜೆಪಿ ಮೇಲುಗೈ ಸಾಧಿಸಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಲಾ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ.
ಜೆಡಿಎಸ್ ಭದ್ರಕೋಟೆಯಾದ ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಚುನಾವಣಾ ಫಲಿತಾಂಶ

ಬಿಜೆಪಿ- 11

ಬೆಂಗಳೂರು ನಗರ – ಗೋಪಿನಾಥ ರೆಡ್ಡಿ
ಮಡಿಕೇರಿ – ಸುಜಾ ಕುಶಾಲಪ್ಪ
ಉತ್ತರ ಕನ್ನಡ – ಗಣಪತಿ ಉಳ್ವೇಕರ
ಉಡುಪಿ-ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ
ಕಲಬುರಗಿ – ಯಾದಗಿರಿ – ಬಿ ಜಿ ಪಾಟೀಲ್
ಹುಬ್ಬಳ್ಳಿ – ಧಾರವಾಡ – ಪ್ರದೀಪ್ ಶೆಟ್ಟರ್
ವಿಜಯಪುರ-ಬಾಗಲಕೋಟೆ – ಪಿ ಎಚ್ ಪೂಜಾರ
ಶಿವಮೊಗ್ಗ – ಡಿ.ಎಸ್.ಅರುಣ
ಚಿತ್ರದುರ್ಗ – ಕೆಎಸ್ ನವೀನ
ಬಳ್ಳಾರಿ – ವೈ.ಎಂ. ಸತೀಶ
ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ

ಕಾಂಗ್ರೆಸ್ – 11

ಬೀದರ್ – ಭೀಮರಾವ್ ಪಾಟೀಲ್ ಹುಮ್ನಾಬಾದ್‌
ಹುಬ್ಬಳ್ಳಿ – ಧಾರವಾಡ – ಸಲೀಂ ಅಹ್ಮದ್
ವಿಜಯಪುರ-ಬಾಗಲಕೋಟೆ – ಸುನೀಲ್ ಗೌಡ ಪಾಟೀಲ
ತುಮಕೂರು – ಕೆ.ಆರ್‌. ರಾಜೇಂದ್ರ
ಕೋಲಾರ – ಎಂ.ಎಲ್. ಅನಿಲ್ ಕುಮಾರ್
ರಾಯಚೂರು-ಕೊಪ್ಪಳ – ಶರಣಗೌಡ ಪಾಟೀಲ ಬಯ್ಯಾಪುರ
ಮಂಡ್ಯ – ದಿನೇಶ್ ಗೂಳಿಗೌಡ
ಮೈಸೂರು – ಚಾಮರಾಜನಗರ – ಡಿ. ತಿಮ್ಮಯ್ಯ
ಉಡುಪಿ-ದಕ್ಷಿಣ ಕನ್ನಡ – ಮಂಜುನಾಥ್ ಭಂಡಾರಿ
ಬೆಳಗಾವಿ ಚನ್ನರಾಜು
ಬೆಂಗಳೂರು ಗ್ರಾಮಾಂತರ – ಎಸ್.ರವಿ

ಜೆಡಿಎಸ್ – 1
ಹಾಸನ – ಸೂರಜ್ ರೇವಣ್ಣ

ಮೈಸೂರು-ಮಂಜೇಗೌಡ

ಪಕ್ಷೇತರ – 1
ಬೆಳಗಾವಿ – ಲಖನ್ ಜಾರಕಿಹೊಳಿ

ದ್ವಿಸದಸ್ಯತ್ವ

ಉಡುಪಿ-ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ)
ಉಡುಪಿ-ದಕ್ಷಿಣ ಕನ್ನಡ – ಮಂಜುನಾಥ್ ಭಂಡಾರಿ (ಕಾಂಗ್ರೆಸ್)
ಮೈಸೂರು – ಚಾಮರಾಜನಗರ – ಡಿ. ತಿಮ್ಮಯ್ಯ (ಕಾಂಗ್ರೆಸ್)
ಮೈಸೂರು – ಚಾಮರಾಜನಗರ – ರಘು ಕೌಟಿಲ್ಯ (ಬಿಜೆಪಿ)
ವಿಜಯಪುರ-ಬಾಗಲಕೋಟೆ – ಸುನೀಲ್ ಗೌಡ ಪಾಟೀಲ್ (ಕಾಂಗ್ರೆಸ್)

ಪ್ರಮುಖ ಸುದ್ದಿ :-   ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ ಹಸ್ತಾಂತರ

ಮೈಸೂರು-ಮಂಜೇಗೌಡ (ಜೆಡಿಎಸ್‌)
ವಿಜಯಪುರ-ಬಾಗಲಕೋಟೆ – ಪಿ ಎಚ್ ಪೂಜಾರ್ (ಬಿಜೆಪಿ)
ಹುಬ್ಬಳ್ಳಿ – ಧಾರವಾಡ – ಸಲೀಂ ಅಹ್ಮದ್ (ಕಾಂಗ್ರೆಸ್)
ಹುಬ್ಬಳ್ಳಿ – ಧಾರವಾಡ – ಪ್ರದೀಪ್ ಶೆಟ್ಟರ್ (ಬಿಜೆಪಿ)
ಬೆಳಗಾವಿ- ಚನ್ನರಾಜು (ಕಾಂಗ್ರೆಸ್)
ಬೆಳಗಾವಿ – ಲಖನ್ ಜಾರಕಿಹೊಳಿ (ಪಕ್ಷೇತರ)

ಮತಕ್ಷೇತ್ರಗಳ ಫಲಿತಾಂಶದ ವಿವರ

*ಬೆಳಗಾವಿಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ.   ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಬೆಳಗಾವಿಯಲ್ಲಿ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸದಸ್ಯ ಮಹಾಂತೇಶ್ ಕವಟಿಮಠ ಸೋತ್ತಿದ್ದಾರೆ. ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿದ್ದ ಲಖನ್ ಜಾರಕಿಹೊಳಿ ಗೆಲುವಿನ ನಗೆ ಬೀರಿದ್ದಾರೆ.

* ಉತ್ತರ ಕನ್ನಡದಲ್ಲಿ ಬಿಜೆಪಿಯ ಗಣಪತಿ.ಡಿ ಉಳ್ವೇಕರ್ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕಾಂಗ್ರೆಸ್ಸಿನ ಭೀಮಣ್ಣ ನಾಯ್ಕ ಅವರನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಬಿಜೆಪಿ ಆಯ್ಕೆಯಾಗುವಂತೆ ಮಾಡಿದ್ದಾರೆ.

* ಕೊಡಗು ಕ್ಷೇತ್ರದ ಫಲಿತಾಂಶ ಪ್ರಥಮವಾಗಿ ಪ್ರಕಟವಾಗಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆದ್ದಿದ್ದಾರೆ. ಅವರು ಕಾಂಗ್ರೆಸ್‍ನ ಡಾ.ಮಂಥರ್ ಗೌಡ ವಿರುದ್ಧ 105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

* ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಡಾ.ಸೂರಜ್ ರೇವಣ್ಣ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ ವಿರುದ್ಧ 1531 ಮತಗಳ ಅಂತರದಿಂದ ಭರ್ಜರಿ ಜಯ ಕಂಡಿದ್ದಾರೆ.

* ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಂ.ಕೆ.ಪ್ರಾಣೇಶ್ ಕೇವಲ 6 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 1182 ಮತಗಳನ್ನು ಪಡೆದರೆ ಪ್ರಾಣೇಶ್ 1188 ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ 39 ಮತಗಳು ಅಸಿಂಧುವಾಗಿವೆ. ಮತಗಳನ್ನು ಮರು ಎಣಿಕೆ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

* ಬೆಂಗಳೂರು ನಗರ ವಿಧಾನಪರಿಷತ್ ಕ್ಷೇತ್ರದಲ್ಲಿ ಗೋಪಿನಾಥ್ ರೆಡ್ಡಿ ವಿಜಯದ ನಗೆ ಬೀರಿದ್ದಾರೆ. ಕಾಂಗ್ರೆಸ್‍ನ ಸಾವಿರ ಕೋಟಿ ಸರದಾರ ಯೂಸೂಫ್ ಶರೀಫ್(ಕೆಜಿಎಫ್) ಬಾಬು ಅವರಿಗೆ ಸೋಲುಣಿಸಿದ್ದಾರೆ.

*ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹಮ್ಮದ್ ಪ್ರಥಮ ಹಂತದಲ್ಲೇ ವಿಜಯದ ನಗೆ ಬೀರಿದ್ದು, ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ 2ನೇ ಹಂತದಲ್ಲಿ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ, ಕಾಂಗ್ರೆಸ್‍ನ ಮಂಜುನಾಥ್ ಬಂಡಾರಿ ಗೆಲುವು ಸಾಧಿಸಿದ್ದಾರೆ.

* ಬೀದರಿಲ್ಲಿ ಕಾಂಗ್ರೆಸ್‍ನ ಭೀಮರಾವ್ ಪಾಟೀಲ್ ಬಿಜೆಪಿಯ ಪ್ರಕಾಶ್ ಖಂಡ್ರೆ ಅವರಿಗಿಂತ 220 ಮತಗಳ ಅಂತರದಿಂದ ಗೆಲುವು ಸಾಸಿದ್ದಾರೆ. ಕಾಂಗ್ರೆಸ್‌ ಕ್ಷೇತ್ರ ಉಳಿಸಿಕೊಂಡಿದೆ.

* ಕಲಬುರಗಿಯಲ್ಲೂ ಕೂಡ ಬಿಜೆಪಿ ಬಿ. ಜಿ. ಪಾಟೀಲ್ ಗೆಲುವು ಸಾಧಸಿದ್ದು, ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಮುಖಭಂಗವಾಗಿದೆ. ಬಿಜೆಪಿ ಕ್ಷೇತ್ರ ಉಳಿಸಿಕೊಂಡಿದೆ.

* ಬಳ್ಳಾರಿಯಲ್ಲಿ ಕಾಂಗ್ರೆಸ್‍ನ ನಿರೀಕ್ಷೆ ಹುಸಿಯಾಗಿದ್ದು, ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಬಿಜೆಪಿಯ ವೈ.ಎಂ.ಸತೀಶ್ ವಿರುದ್ಧ ಸೋಲುಕಂಡಿದ್ದಾರೆ. ಇಲ್ಲಿ ಹಿಂದಿನ ಸಲ ಕಾಂಗ್ರೆಸ್‌ ಗೆದ್ದಿತ್ತು.

* ಚಿತ್ರದುರ್ಗ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಸ್.ನವೀನ್ ಅವರು ಗೆಲುವಿನ ನಗೆ ಬೀರಿದ್ದಾರೆ. ಬೆಂಗಳೂರು ಮೂಲದ ಬಿ.ಸೋಮಶೇಖರ್ ಇಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಸಿದ್ದರು, ಆದರೆ ಜಯಗಳಿಸಲು ಸಾಧ್ಯವಾಗಿಲ್ಲ.

* ಮಾಜಿ ಮಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿಯಿಂದ ಕಣಕ್ಕಿಳಿಸಿದ್ದ ಡಿ.ಎಸ್.ಅರುಣ್ ಜಯ ಸಾಧಿಸಿದ್ದಾರೆ. ಕಾಂಗ್ರೆಸ್‍ನಿಂದ ಹಾಲಿ ಸದಸ್ಯರಾಗಿದ್ದ ಪ್ರಸನ್ನಕುಮಾರ್ ಜಯ ಸಾಧಸುವಲ್ಲಿ ವಿಫಲರಾಗಿದ್ದಾರೆ.

* ಜೆಡಿಎಸ್ ಭದ್ರಕೋಟೆಯಾಗಿದ್ದ ತುಮಕೂರಿನಲ್ಲಿ ಕಾಂಗ್ರೆಸ್‍ನ ಆರ್.ರಾಜೇಂದ್ರಕುಮಾರ್ ಜಯ ಗಳಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಲೋಕೇಶ್ ಅವರು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಏರ್ಪಟ್ಟಿದ್ದ ತೀವ್ರ ಪೈಪೋಟಿ ನಡುವೆ ಕಾಂಗ್ರೆಸ್ ಜಯದ ನಗೆ ಬೀರಿದೆ.

* ತನ್ನ ಭದ್ರಕೋಟೆ ಮಂಡ್ಯದಲ್ಲೂ ಜೆಡಿಎಸ್‌ಗೆ ಮುಖಭಂಗವಾಗಿದೆ. ಜಿಲ್ಲೆ 6ಕ್ಕೆ 6 ಜೆಡಿಎಸ್‌ ಶಾಸಕರಿದ್ದರೂ ಸಹ ಹಾಲಿ ಪರಿಷತ್ ಸದಸ್ಯರಾಗಿದ್ದ ಅಪ್ಪಾಜಿಗೌಡಗೆ ಸೋಲಾಗಿದೆ. ಅಲ್ಲಿ ಕಾಂಗ್ರೆಸ್ಸಿನ ದಿನೇಶ ಗೂಳಿಗೌಡ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಸಚಿವರಾದ ಸೋಮಶೇಖರ್ ಅವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಅವರನ್ನು ಕಾಂಗ್ರೆಸ್‍ನಿಂದ ಇಲ್ಲಿ ಕಣಕ್ಕಿಳಿಸಲಾಗಿತ್ತು. ಹಾಲಿ ಪರಿಷತ್ ಸದಸ್ಯರಾಗಿದ್ದ ಅಪ್ಪಾಜಿ ಗೌಡ ಅವರನ್ನು ಜೆಡಿಎಸ್ ಮತ್ತೆ ಕಣಕ್ಕಿಳಿಸಿತ್ತು. ದಿನೇಶ್ ಗೂಳಿಗೌಡ ವಿಜಯದ ನಗೆ ಬೀರಿದ್ದಾರೆ.

* ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‍ನ ಎಸ್.ರವಿ ಗೆಲುವು ಸಾಧಿಸಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್‍ನ ಅನಿಲ್‍ಕುಮಾರ್ ಜಯ ಸಾಧಿಸಿದ್ದಾರೆ. ಮೈಸೂರಿನಲ್ಲಿ ಡಾ.ಡಿ.ತಿಮ್ಮಯ್ಯ ಅವರು ವಿಜಯದ ನಗೆ ಬೀರಿದ್ದಾರೆ. ರಾಯಚೂರು-ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಗೆಲುವು ಕಂಡಿದ್ದಾರೆ.

ದ್ವಿಸದಸ್ಯ ಕ್ಷೇತ್ರ ಬಿಜಾಪುರದಲ್ಲಿ ಕಾಂಗ್ರೆಸ್‍ನ ಸುನೀಲ್‍ಗೌಡ ಪಾಟೀಲ್ ಮೊದಲ ಪ್ರಾಶಸ್ತ್ಯದ ಮತ ಪಡೆದು ಗೆಲುವು ಸಾಧಿಸಿದರೆ , ಬಿಜೆಪಿಯ ಅಭ್ಯರ್ಥಿ ಪ್ರಹ್ಲಾದ್ ಪೂಜಾರಿ 2ನೇ ಸ್ಥಾನದಲ್ಲಿದ್ದಾರೆ.

 

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement