ಅಂಕೋಲಾ: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮವರೇ ಕೆಲವರು ಆಟವಾಡಿದ್ದು, ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಜನಕ್ಕೆ ತಿಳಿಯುವುದಿಲ್ಲ ಎಂಬ ಭ್ರಮೆಯಲ್ಲಿದ್ದಾರೆ. ಮುಂದೊಂದು ದಿನ ಇದು ಹೊರಬಂದೇ ಬರುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಪಕ್ಷವಿರೋಧಿ ಚಟುವಟಿಕೆ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದಿರುವ ಗಣಪತಿ ಉಳ್ವೇಕರ್ ಅವರಿಗೆ ಬಿಜೆಪಿ ಕಾರ್ಯಾಲಯದಲ್ಲಿ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಶಾಸಕರು ಈ ಮಾತು ಹೇಳಿದ್ದಾರೆ.
ಪಕ್ಷಕ್ಕೆ ಮೋಸ ಮಾಡಿದವರು ಆತ್ಮವಿಮರ್ಶೆ ಮಾಡಿಕೊಳ್ಳಲಿ
ನಮಗೆಲ್ಲ ಪಕ್ಷ ಎಂದರೆ ತಾಯಿ ಸಮಾನ. ಪಕ್ಷದ ಗೆಲುವಿಗೆ ಹಲವಾರು ಜನ ಹಗಲಿರುಳು ಶ್ರಮಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂಬ ಸಮಾಧಾನ ಇದ್ದರೂ ನಿರೀಕ್ಷಿತ ಮತಗಳು ಬರಲಿಲ್ಲ ಎಂಬ ನೋವಿದೆ. ನಮ್ಮದೇ ೧೬೫೦ ರಷ್ಟು ಮತಗಳು ಜಿಲ್ಲೆಯಲ್ಲಿದ್ದವು. ನಮಗೆ ಸ್ವತಂತ್ರರು, ಕಾಂಗ್ರೆಸ್ಸಿಗರು ಸಹ ಮತ ಹಾಕಿದ್ದಾರೆ. ಆದರೂ ಬಿದ್ದಿದ್ದು ಕೇವಲ ೧೫೧೪ ಮತಗಳು. ಉಳಿದ ನಮ್ಮ ಮತಗಳು ಎಲ್ಲಿ ಹೋದವು ಎಂದು ಪ್ರಶ್ನೆ ಮಾಡಿದ ಅವರು ಪಕ್ಷಕ್ಕೆ ಮೋಸ ಮಾಡಿದವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಾಳೆ ಯಾವ ಮುಖ ಹೊತ್ತು ಉಳ್ವೇಕರ್ ಅವರ ಬಳಿ ಬರುತ್ತೀರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನೂತನ ಸದಸ್ಯ ಗಣಪತಿ ಉಳ್ವೇಕರ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ಅವರು ಹೇಳಿದರು. ಮಂಡಲಾಧ್ಯಕ್ಷ ಸಂಜಯ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಘು ಭಟ್ ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಶಾಂತಲಾ ನಾಡಕರ್ಣಿ, ಭಾಸ್ಕರ ನಾರ್ವೇಕರ್, ರಾಜೇಂದ್ರ ನಾಯ್ಕ, ಜಗದೀಶ ನಾಯಕ ಮೊಗಟಾ, ರೇಖಾ ಗಾಂವಕರ್, ಮಾರುತಿ ಗೌಡ ಮತ್ತಿತರರು ಇದ್ದರು.


ನಿಮ್ಮ ಕಾಮೆಂಟ್ ಬರೆಯಿರಿ