ವಧುವಿನ ಕ್ಷೇಮಕ್ಕಾಗಿ ಮದುವೆಯ ಸಮಯದಲ್ಲಿ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ: ಕೇರಳ ಹೈಕೋರ್ಟ್‌

ತಿರುವನಂತಪುರ: ಪಾಲಕರು ಮದುವೆ ಸಮಯದಲ್ಲಿ ತಮ್ಮ ಮಗಳಿಗೆ ನೀಡುವ ಉಡುಗೊರೆಯನ್ನು ವರದಕ್ಷಿಣೆ ಎಂದು ಪರಿಗಣಿಸುವುದು ಸರಿಯಲ್ಲ, ಒಂದು ವೇಳೆ ಗಂಡಿನ ಮನೆಯವರು ಯಾವುದೇ ಬೇಡಿಕೆ ಇಟ್ಟಿರದಿದ್ದರೂ ಈ ರೀತಿಯಾಗಿ ಮಗಳಿಗೆ ನೀಡುವ ಉಡುಗೊರೆ ವರದಕ್ಷಿಣೆಯಾಗುವುದಿಲ್ಲ. ಇದು ವರದಕ್ಷಿಣೆ ನಿಷೇಧ ಕಾಯ್ದೆ 1961 ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.
ತಮ್ಮ ಪತ್ನಿ ತಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್‌ ಹಾಕಿದ್ದು, ಅದನ್ನು ರದ್ದು ಮಾಡುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಕಳೆದ ವರ್ಷ ದೀಪ್ತಿ ಮತ್ತು ವಿಷ್ಣು ಅವರ ವಿವಾಹವಾಗಿದೆ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದರಿಂದ ದೀಪ್ತಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ವರದಕ್ಷಿಣೆಯ ರೂಪದಲ್ಲಿ ತಮ್ಮ ಪತಿ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ದೂರಿದ್ದರು. ಅದನ್ನು ವಾಪಸ್‌ ಕೊಡುವಂತೆ ಆದೇಶ ಮಾಡಲಾಗಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪತಿ ವಿಷ್ಣು ಹೈಕೋರ್ಟ್‌ಗೆ ಹೋಗಿದ್ದರು. ನಾನು ಯಾವುದೇ ವರದಕ್ಷಿಣೆ ಪಡೆದುಕೊಂಡಿಲ್ಲ. ಆಕೆಯ ತವರಿನವರು ಮಗಳಿಗಾಗಿ ತಮ್ಮ ಇಚ್ಛೆಯಿಂದ ಚಿನ್ನಾಭರಣ ನೀಡಿದ್ದಾರೆ. ಅದು ನಮ್ಮಿಬ್ಬರ ಹೆಸರಿನಲ್ಲಿ ಬ್ಯಾಂಕ್‌ ಲಾಕರ್‌ನಲ್ಲಿದ್ದು, ಅದರ ಕೀಲಿ ಕೂಡ ಪತ್ನಿಯ ಬಳಿಯೇ ಇದೆ. ಹಾಗಿದ್ದರೂ ಸುಖಾ ಸುಮ್ಮನೆ ವರದಕ್ಷಿಣೆ ಕಿರುಕುಳ ಕೇಸ್‌ ಹಾಕಿದ್ದಾಳೆ ಎಂದು ವಿಷ್ಣು ಅರ್ಜಿಯಲ್ಲಿ ತಿಳಿಸಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ಆರ್. ಅನಿತಾ, ವರದಕ್ಷಿಣೆ ನಿಷೇಧ ಕಾಯ್ದೆ 1961 ರ ಅಡಿಯಲ್ಲಿ ವಧುವಿನ ಕ್ಷೇಮಕ್ಕಾಗಿ ಮದುವೆಯ ಸಮಯದಲ್ಲಿ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ. ಇಲ್ಲಿ ಲಾಕರ್‌ ಕೀ ಕೂಡ ಆಕೆಯ ಕೈಯಲ್ಲಿಯೇ ಇದ್ದು, ಅದನ್ನು ಅವಳ ಪಾಲಕರು ಮಗಳ ಮೇಲಿನ ಪ್ರೀತಿಗಾಗಿ ನೀಡಿದ್ದರೇ ವಿನಃ ಗಂಡಿನ ಮನೆಯವರ ಬೇಡಿಕೆಯಿಂದ ನೀಡಿದ್ದಲ್ಲ ಎಂದು ಪತಿಯ ಅರ್ಜಿಯನ್ನು ಮಾನ್ಯ ಮಾಡಿದೆ. ವರದಕ್ಷಿಣೆ ಕಿರುಕುಳ ಪ್ರಕರಣದಿಂದ ಪತಿಯನ್ನು ಮುಕ್ತಗೊಳಿಸಿದೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement