ಡಿಕೆಶಿಗೆ ಕಠೋರವಾಗಿಯೇ ಉತ್ತರ ಕೊಡ್ತೇನೆ, ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದರಿಂದ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಸಾಹುಕಾರ್ ಸೋದರರು ಇದ್ದರೂ ಕೊನೆ ಕ್ಷಣದಲ್ಲಿ ಲಖನ್ ಜಾರಕಿಹೊಳಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣಾ ಕಣದ ಚಿತ್ರಣ ಬದಲಾಯಿತು. ಕಾಂಗ್ರೆಸ್‌ ಹಾಗೂ ಪಕ್ಷೇತರ ಲಖನ್‌ ಜಾರಕಿಹೊಳಿ ಗೆದ್ದರು., ಆದರೆ ಗೆಲ್ಲುವ ಕುದುರೆಯಾಗಿದ್ದ ಬಿಜೆಪಿ ಸೋಲನುಭವಿಸಿತು.
ಈ ಚರ್ಚೆಗಳ ನಡುವೆ ಪಕ್ಷದ ಸೋಲಿನ ಬಗ್ಗೆ ಇಂದು, ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ನಾಯಕರಿಂದ ನನಗೆ ಫೋನ್ ಬಂತು. ಲಕ್ಷ್ಮೀ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ಫೋನ್‌ ಬಂದಿದೆ. ಹೀಗಾಗಿ ನಾನು ಸದ್ಯಕ್ಕೆ ಏನೂ ಮಾತನಾಡುವುದಿಲ್ಲ. ನಾನು ದೊಡ್ಡ ಬಾಂಬ್ ಸಿಡಿಸಬಹುದು ಆದರೆ ಏನನ್ನೂ ಹೇಳುವುದಿಲ್ಲ. ನಮ್ಮ ಪಕ್ಷ ಸೋಲಬಾರದಿತ್ತು ಸೋತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದರು.
ನಮ್ಮ ಪಕ್ಷದಲ್ಲಿ ಏನಾಗಿದೆ, ಏನಾಗಿಲ್ಲ ಎಂಬುದು ಬಗ್ಗೆ ಪಕ್ಷದ ವರಿಷ್ಠರ ಜತೆಗೆ ಮಾತನಾಡಿದ್ದೇನೆ. ಯಾಕೆ ಸೋತಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ‌. ಡಿ.ಕೆ. ಶಿವಕುಮಾರ್ ಬಗ್ಗೆ ಬಹಳ ಕಠೋರವಾಗಿ ಹೇಳುವವನಿದ್ದೆ. ಆದರೆ ಏನನ್ನೂ ಮಾತನಾಡುವುದಿಲ್ಲ ಎಂದು ಹೇಳಿದರು.
ಕೊನೆಯ ಮೂರು ದಿನಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಯಿತು. ಬಿಜೆಪಿಗೆ ಹೋಗುವ ಕುರಿತು ಲಖನ್ ಜಾರಕಿಹೊಳಿ‌ ತೀರ್ಮಾನ ತೆಗೆದುಕೊಳ್ಳಬೇಕು. ಲಖನ್ ಜಾರಕಿಹೊಳಿ‌ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ‌. ಚುನಾವಣೆ ಚಿತ್ರಣ ಬದಲಾಗಿದ್ದಕ್ಕೆ ನಾನು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದೆ. ಈಗ ಬಿಜೆಪಿ ಸೋಲನ್ನ ರಮೇಶ್ ಜಾರಕಿಹೊಳಿ‌ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾರೆ. ಗುಡ್ಡಕ್ಕೆ ಶಕ್ತಿ ಹೊರುವ ತಾಕತ್ತು ಇದೆ ಎಂದು ಮಾರ್ಮಿಕವಾಗಿ ಹೇಳಿದರು.
ಸಂಚು ನಡೆದಿರುವ ಬಗ್ಗೆ ನನಗೆ ಪಕ್ಕಾ ಮಾಹಿತಿ ಇಲ್ಲ, ಈ ಬಗ್ಗೆ ವಿಚಾರಿಸಿ ಮಾಹಿತಿ ಪಡೆದ ನಂತರವೇ ಮಾತನಾಡುತ್ತೇನೆ. ನಾನು ಕಾಂಗ್ರೆಸ್ ಸೋಲಿಸುತ್ತೇನೆ ಅಂತಾ ಹಠಕ್ಕೆ ಬಿದ್ದಿದ್ದು ನಿಜ. ಇವತ್ತು ಅವರ ಪಕ್ಷ ಗೆದ್ದಿದೆ, ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲಿ ತಪ್ಪಿದೆ ಎಂಬುದರ ಬಗ್ಗೆ ಆಂತರಿಕವಾಗಿ ಚರ್ಚೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಡಿ.ಕೆ.ಶಿವಕುಮಾರ ಬಗ್ಗೆ ಬಹಿರಂಗವಾಗಿ ಕಠೋರವಾದ ಉತ್ತರ ನೀಡುತ್ತೇನೆ ಎಂದರು.
ಸಿದ್ದರಾಮಯ್ಯ ವೇಸ್ಟ್ ಬಾಡಿ:
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಭಯ ಬಂದಿದೆ. ಸಿದ್ದರಾಮಯ್ಯ ವೇಸ್ಟ್ ಬಾಡಿ ಹಿಂದುಳಿದವರ ಪ್ರಮುಖ ನಾಯಕ ಹೊರ ಬೀಳುತ್ತಿದ್ದಾನೆ. ಕುರುಬರೆಲ್ಲರೂ ಸಿದ್ದರಾಮಯ್ಯರನ್ನು ರಿಜೆಕ್ಟ್ ಮಾಡಿದ್ದಾರೆ. ಹೀಗಾಗಿ ತನಗೆ ಚ್ಯುತಿ ಬರುತ್ತದೆ ಎಂದು ಅವರು ಹೆದರಿದ್ದಾರೆ. ಸಿದ್ದರಾಮಯ್ಯರದ್ದು ಮುಗಿದ ಕಥೆ, ಮುಂದಿನ ಬಾರಿ ಸೋಲ್ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement