ಲಖಿಂಪುರ ಖೇರಿ ಘಟನೆ: ಜೈಲಿನಲ್ಲಿರುವ ಮಗನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಕೋಪಗೊಂಡ ಕೇಂದ್ರ ಸಚಿವ ಅಜಯ್ ಮಿಶ್ರ:ದೆಹಲಿಗೆ ಬುಲಾವ್‌

ನವದೆಹಲಿ: ಉತತರ ಪ್ರದೇಶದ ಲಖೀಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ಜೈಲು ಸೇರಿರುವ ತಮ್ಮ ಪುತ್ರ ಆಶಿಶ್ ಬಗ್ಗೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಬುಧವಾರ ಕೋಪಗೊಂಡರು.
ಅಕ್ಟೋಬರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ರೈತರು ಮತ್ತು ಪತ್ರಕರ್ತನನ್ನು ಸಾಯಿಸಿದ ಆರೋಪ ಹೊತ್ತಿರುವ 13 ಆರೋಪಿಗಳಲ್ಲಿ ಸಚಿವರ ಪುತ್ರ ಆಶಿಶ್ ಮಿಶ್ರಾ ಸೇರಿದ್ದಾರೆ. ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಪ್ರತಿಪಕ್ಷಗಳ ಬೇಡಿಕೆಯ ನಡುವೆ ಅವರಿಗೆ ದೆಹಲಿಗೆ ಬರುವಂತೆ ಬುಲಾವ್‌ ನೀಡಲಾಗಿದೆ ಎಂದು ವರದಿಯಾಗಿದೆ.
ಸಚಿವರು ಪತ್ರಕರ್ತರನ್ನು ತಳ್ಳಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ಲಖಿಂಪುರ ಖೇರಿಯಲ್ಲಿ ಹೊಸದಾಗಿ ನಿರ್ಮಿಸಲಾದ ವಾರ್ಡ್‌ ಉದ್ಘಾಟಿಸಲು ಮಿಶ್ರಾ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ವಿಡಿಯೊ ಚಿತ್ರೀಕರಿಸಲಾಗಿದೆ.
ಲಖೀಂಪುರ ಖೇರಿ ಘಟನೆಯ ಕುರಿತು ಎಸ್‌ಐಟಿ ವರದಿಗೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ಪ್ರಶ್ನೆಗಳನ್ನು ಕೇಳಿದಾಗ ಸಚಿವರು ಕ್ಯಾಮೆರಾವನ್ನು ಬಂದ್‌ ಮಾಡುವಂತೆ ಸುದ್ದಿಗಾರರನ್ನು ಕೇಳಿದರು ಮತ್ತು ಪತ್ರಕರ್ತರೊಬ್ಬರ ಮೊಬೈಲ್ ಫೋನ್ ಕಿತ್ತುಕೊಂಡರು. ಲಖೀಂಪುರ ಖೇರಿ ಘಟನೆಯು ಪೂರ್ವ ಯೋಜಿತವಾಗಿದೆ ಮತ್ತು ಆಶಿಶ್ ಮಿಶ್ರಾ ಅವರನ್ನು ಕೊಲೆ ಯತ್ನಕ್ಕಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿ ಹೇಳಿದೆ.

ಏತನ್ಮಧ್ಯೆ, ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಹೆಚ್ಚಿಸಿವೆ. ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರವು ಸಚಿವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement