ನವದೆಹಲಿ: ಡಿಸೆಂಬರ್ 9 ರಂದು ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ 47 ವರ್ಷದ ಡಿಆರ್ಡಿಒ ವಿಜ್ಞಾನಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಬಂಧಿತ ವಿಜ್ಞಾನಿ ವಿಚಾರಣೆ ವೇಳೆ ತಪ್ಪೊಪ್ಪಿಕೊಡಿದ್ದು, ಕೋರ್ಟ್ ಗೆ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರನ್ನು ಕೊಲ್ಲುವ ಉದ್ದೇಶಕ್ಕೆ ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿಸೆಂಬರ್ 9ರಂದು ಕೋರ್ಟ್ ರೂಮ್ ನಂ.102 ರಲ್ಲಿ ನಡೆದ ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿದ್ದರು. ಬಂಧಿತ ಆರೋಪಿಯನ್ನು ಭರತ್ ಭೂಷಣ್ ಕಟಾರಿಯಾ ಎಂದು ಗುರುತಿಸಲಾಗಿದ್ದು, ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್ಡಿಒ) ಹಿರಿಯ ವಿಜ್ಞಾನಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯು ತಮ್ಮ ನೆರೆಯ ವಕೀಲರೊಬ್ಬರೊಂದಿಗೆ ಜಗಳವಾಡಿದ್ದರು. ಹೀಗಾಗಿ ಅವರೇ ಬಾಂಬ್ ತಯಾರಿಸಿ ನ್ಯಾಯಾಲಯದ ಕೊಠಡಿ ಸಂಖ್ಯೆ 102ರಲ್ಲಿ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ಆರೋಪಿಯು ಘಟನೆ ನಡೆದ ದಿನ ಬೆಳಗ್ಗೆ 9.33ಕ್ಕೆ ಎರಡು ಬ್ಯಾಗ್ಗಳೊಂದಿಗೆ ನ್ಯಾಯಾಲಯವನ್ನು ಪ್ರವೇಶಿಸಿದ್ದು, ಅದರಲ್ಲಿ ಒಂದನ್ನು ನ್ಯಾಯಾಲಯದ ಕೊಠಡಿಯೊಳಗೆ ಬಿಟ್ಟು ಹೋಗಿದ್ದಾರೆ.
ಈ ಇಬ್ಬರೂ ಪರಸ್ಪರರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರು ನೆರೆಹೊರೆಯವರು ಮತ್ತು ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಮೇಲ್ನೋಟಕ್ಕೆ, ಕಟಾರಿಯಾ ವಕೀಲರ ವಿರುದ್ಧ ದ್ವೇಷ ಹೊಂದಿದ್ದರು ಎಂದು ತೋರುತ್ತದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ