ತೆರೆಗೆ ಬರಲಿದೆ ಮಂಗಲಯಾನ ಕಥೆ ಬಿಂಬಿಸುವ ವಿಶ್ವದ ಮೊದಲ ವಿಜ್ಞಾನ ವಿಚಾರದ ಸಂಸ್ಕೃತ ಚಲನಚಿತ್ರ

ತಿರುವನಂತಪುರ: ಸಂಸ್ಕೃತವೆಂದರೆ ದೇವ ಭಾಷೆಯೆಂದೇ ಪ್ರತೀತಿ. ಈಗ ರಾಕೆಟ್‌, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳು ಸಹ ಸಂಸ್ಕೃತ ಭಾಷೆಯಲ್ಲಿ ಪ್ರಸ್ತಾವನೆ ಆಗುತ್ತಿದೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ವಿನೋದ್‌ ಮಂಕ್ರಾ ಅವರು ಸಂಸ್ಕೃತದಲ್ಲಿ ಮಂಗಳ ಗ್ರಹಕ್ಕೆ ಇಸ್ರೋ ಕೈಗೊಂಡಿದ್ದ ಯಶಸ್ವಿ ಯಾನವನ್ನು ಆಧರಿಸಿ ಹೊಸ ಸಾಕ್ಷ್ಯಚಿತ್ರ ನಿರ್ಮಿಸಲಿದ್ದಾರೆ. ವಿಜ್ಞಾನ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿ ಸಿನಿಮಾ ನಿರ್ಮಾಣ ಜಗತ್ತಿನ ಸಿನಿಮಾ ಇತಿಹಾಸದಲ್ಲಿಯೇ ಇದು ಮೊದಲನೇ ಪ್ರಯತ್ನ ಎಂದು ಹೇಳಲಾಗುತ್ತಿದೆ.
ವಿನೋದ್‌ ಮಂಕ್ರಾ ಹೊಸ ಸಾಕ್ಷ್ಯಚಿತ್ರಕ್ಕೆ “ಯಾನಮ್‌’ ಎಂದು ಹೆಸರಿಟ್ಟಿದದಾರೆ. ಒಟ್ಟು 45 ನಿಮಿಷಗಳ ಅವಧಿಯ ಸಿನಿಮಾವನ್ನು ಇಸ್ರೋದ ನಿವೃತ್ತ ಮುಖ್ಯಸ್ಥ ಡಾ.ಕೆ.ರಾಧಾಕೃಷ್ಣನ್‌ ಬರೆದ “ಮೈ ಒಡಿಸ್ಸಿ- ಮೆಮೊರೀಸ್‌ ಆಫ್ ದ ಮ್ಯಾನ್‌ ಬಿಹೈಂಡ್‌ ದ ಮಂಗಲ್‌ಯಾನ್‌ ಮಿಷನ್‌ (My Odyssey: Memoirs of the Man Behind the Mangalyaan Mission) ಎಂಬ ಕೃತಿ ಆಧರಿಸಿ ನಿರ್ಮಿಸಲಾಗುತ್ತಿದೆ.
ಸಿನಿಮಾದಲ್ಲಿನ ಸಂಭಾಷಣೆಗಳು ಪೂರ್ಣ ಪ್ರಮಾಣದಲ್ಲಿ ಸಂಸ್ಕೃತದಲ್ಲಿಯೇ ರಚಿಸಲಾಗಿದೆ ಎಂದು ನಿರ್ದೇಶಕ ಮಂಕ್ರಾ ಹೇಳಿದ್ದಾರೆ.
2022ರ ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ. ಏಪ್ರಿಲ್‌ಗೆ ಸಿನಿಮಾವನ್ನು ತೆರೆಗೆ ತರುವ ಇಚ್ಛೆ ಇದೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಯತ್ನ ಕೈಗೊಳ್ಳಲಾಗುತ್ತಿದೆ. ಎಂದು ಅವರು ತಿಳಿಸಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನಾಸಾ, ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆ, ಸ್ಪೇಸ್‌ ಎಕ್ಸ್‌ನ ವಿಜ್ಞಾನಿಗಳಿಗೆ ಪ್ರಸ್ತಾವಿತ ಸಿನಿಮಾ ತೋರಿಸುವುದಾಗಿ ಅವರು ಹೇಳಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ಸಾಧಿಸಿದ ಪ್ರಧಾನ ಸಾಧನೆಯನ್ನು ಪ್ರಾಚೀನ ಭಾರತದ ಭಾಷೆಯಲ್ಲಿ ಜಗತ್ತಿನ ವಿಜ್ಞಾನಿಗಳು ವೀಕ್ಷಿಸಲಿದ್ದಾರೆ ಎಂದು ನಿರ್ದೇಶಕ ಹೇಳಿಕೊಂಡಿದ್ದಾರೆ.
ಸಾಕ್ಷ್ಯ ಚಿತ್ರವನ್ನು ಹಲವು ತಾಂತ್ರಿಕ ಪರಿಣಿತರ ಸಹಾಯದಿಂದ ನಿರ್ಮಿಸಲಾಗುತ್ತದೆ. ಎ.ವಿ.ಅನೂಪ್‌ ನಿರ್ಮಿಸಲಿದ್ದಾರೆ. 1961ರ ಏ.12ರಂದು ರಷ್ಯಾದ ಯುರಿ ಗಗಾರಿನ್‌ ಅವರು ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಿ ಮುಂದಿನ ವರ್ಷದ ಏಪ್ರಿಲ್‌ಗೆ 61 ವರ್ಷಗಳು ಪೂರ್ತಿಯಾಗಲಿದೆ. ಆ ದಿನಕ್ಕೆ ಸರಿಯಾಗುವಂತೆ ಬಿಡುಗಡೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ನಿರ್ದೇಶಕ ವಿನೋದ್‌ ಹೇಳಿದ್ದಾರೆ. ಸಂಸ್ಕೃತ ಭಾಷೆಯಲ್ಲಿ ಸಾಕ್ಷ್ಯಚಿತ್ರ ಇರಲಿದ್ದರೂ, ವೈಜ್ಞಾನಿಕ ಸಾಕ್ಷ್ಯಚಿತ್ರಕ್ಕೆ ಯಾವ ತಾಂತ್ರಿಕ ಅಂಶಗಳು ಬೇಕೋ ಅದನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement