ವಿಪಕ್ಷಗಳ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ಸುವರ್ಣಸೌಧ(ಬೆಳಗಾವಿ): ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷಗಳ ಕೆಲ ಶಾಸಕರು ಬಾವಿಗಿಳಿದು ಪ್ರತಿಭಟನೆ ಮಾಡಿದರು. ಈ ನಡುವೆಯೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಕ ವಿಧೇಯಕ -2021 ಅನ್ನು ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.
ಪ್ರತಿಪಕ್ಷಗಳ ತೀವ್ರ ಆಕ್ಷೇಪ, ಗದ್ದಲದ ನಡುವೆಯೂ ಮತಾಂತರ ನಿಷೇಧ ವಿಧೇಯಕವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧ್ವನಿಮತಕ್ಕೆ ಹಾಕಿದರು. ಧ್ವನಿಮತದ ಮೂಲಕವೇ ಮತಾಂತರ ನಿಷೇಧ ವಿಧೇಯಕವನ್ನು ಸದನ ಅಂಗೀಕರಿಸಿತು. ಇದರಿಂದ ಸದನದಲ್ಲಿ ಕೋಲಾಹಲ ಉಂಟಾದ ಕಾರಣ 10 ನಿಮಿಷ ಕಲಾಪವನ್ನು ಮುಂದೂಡಲಾಯಿತು. ಕರ್ನಾಟಕ ಸರ್ಕಾರವು ಮಂಗಳವಾರ (ಡಿಸೆಂಬರ್‌21) ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಂಡಿಸಿದ್ದರು. ಕಾಯ್ದೆಗೆ ಗುರುವಾರ (ಡಿಸೆಂಬರ್‌ 23) ಸದನದ ಅನುಮೋದನೆ ದೊರೆಯಿತು. ಪ್ರತಿಪಕ್ಷಗಳ ತೀವ್ರ ಆಕ್ಷೇಪ, ಗದ್ದಲದ ನಡುವೆಯೂ ವಿಧೇಯಕವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧ್ವನಿಮತಕ್ಕೆ ಹಾಕಿದರು. ಧ್ವನಿಮತದ ಮೂಲಕವೇ ವಿಧೇಯಕವನ್ನು ಸದನ ಅಂಗೀಕರಿಸಿತು.
ಪ್ರತಿಪಕ್ಷ ಕಾಂಗ್ರೆಸ್ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು. ವಿಧೇಯಕವನ್ನು ಒಪ್ಪಲು ಸಾಧ್ಯವೇ ಇಲ್ಲ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಆರೋಪಿಸಿ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿತು.ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ವಿಧೇಯಕದ ಕರಡು ರಚಿಸಲಾಗಿತ್ತು. ಇದಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಹಿ ಹಾಕಿದ್ದರು ಎಂಬ ದಾಖಲೆ ಮುಂದಿಡುವ ಮೂಲಕ ಬಿಜೆಪಿ ಪ್ರತಿಪಕ್ಷ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತು.
ಚರ್ಚೆ ನಡೆಸುವಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್​ಎಸ್​ಎಸ್​ ಬಗ್ಗೆ ಮಾತನಾಡಿದ್ದು ಆಡಳಿತ ಪಕ್ಷದ ಸದಸ್ಯರನ್ನು ಕರೆಳಿಸಿತ್ತು. ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ‘ನಾವೆಲ್ಲರೂ ಆರ್​ಎಸ್​ಎಸ್, ದೇಶಭಕ್ತಿಯ ಸಂಸ್ಕಾರ ಪಡೆದವರು​’ ಎಂದು ಘೋಷಿಸಿದರು. ಈಶ್ವರಪ್ಪ ಅವರ ಮಾತಿಗೆ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಗದ್ದಲದ ಮಧ್ಯೆಯೂ ಈಶ್ವರಪ್ಪ ಆರ್ಭಟ ಮುಂದುವರಿಸಿದರು. ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಎದುರು ನಿಂತು ಆಕ್ರೋಶ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚರ್ಚೆ ಮಾಡಲು ಇನ್ನೇನೂ ಉಳಿದಿಲ್ಲ. ಮುಖ್ಯಮಂತ್ರಿ ಉತ್ತರ ಕೇಳಿ, ವಿಧೇಯಕ ಪಾಸ್​ ಮಾಡಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಲೆಂದೇ ಬಾವಿಗೆ ಇಳಿದಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಹಾಗೂ ಅನುಮೋದನೆ ಕೋರಿಕೆಯ ನಂತರ ವಿಧೇಯಕವನ್ನು ಸ್ಪೀಕರ್ ಮತಕ್ಕೆ ಹಾಕಿದರು. ಗದ್ದಲ, ಕೋಲಾಹಲದ ನಡುವೆಯೇ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರವಾಯಿತು.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement