ಕಾಶ್ಮೀರದಲ್ಲಿ 2 ಪ್ರತ್ಯೇಕ ಎನ್‌ಕೌಂಟರ್‌: ನಾಲ್ವರು ಉಗ್ರರ ಹೊಡೆದುರುಳಿಸಿದ ಸೇನೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋಪಿಯಾನ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಹೊಡೆದುರುಳಿಸಿದರೆ, ಪುಲ್ವಾಮಾದಲ್ಲಿ ಇಬ್ಬರು ಗುರುತು ಪತ್ತೆಯಾಗದ ಉಗ್ರರನ್ನು ಕೊಲ್ಲಲಾಗಿದೆ.
ಶೋಪಿಯಾನ್‌ನ ಚೌಗಮ್ ಗ್ರಾಮ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಅವರಿಗೆ ಶರಣಾಗಲು ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಆ ಬಳಿಕ ಎನ್‌ಕೌಂಟರ್‌ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಬ್ಬರು ಭಯೋತ್ಪಾದಕರ ಶವಗಳನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ಉಗ್ರರನ್ನು ಶೋಪಿಯಾನ್‌ನ ಬ್ರರಿಪೋರಾ ನಿವಾಸಿ ಸಜಾದ್ ಅಹ್ಮದ್ ಚಾಕ್ ಮತ್ತು ಪುಲ್ವಾಮಾದ ಅಚಾನ್ ಲಿಟ್ಟರ್‌ನ ರಾಜಾ ಬಸಿತ್ ಯಾಕೂಬ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದು, ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಹರ್ದುಮಿರ್, ತ್ರಾಲ್ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್ ನಲ್ಲಿ ಇಬ್ಬರು ಅಪರಿಚಿತ ಉಗ್ರರು ಹತರಾಗಿದ್ದು, ಅವರ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಅಮಿತ್ ಶಾ ವೀಡಿಯೊ ತಿರುಚಿದ ಆರೋಪ: ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಸಿಎಂಗೆ ಸಮನ್ಸ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement