ಉಡುಪಿ: ಹಿಂದೂ ಧರ್ಮದಿಂದ ಮತಾಂತರಗೊಂಡಿರುವ ಮುಸ್ಲಿಮರು ಹಾಗು ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ. ಹೀಗೆ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನೂ ಹಿಂದೂ ಧರ್ಮಕ್ಕೆ ಕರೆತರಬೇಕು. ಟಿಪ್ಪು ಜಯಂತಿಯಂದೇ ನಾವು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಉಡುಪಿಯಲ್ಲಿ ಪರ್ಯಾಯ ಅದಮಾರು ಮಠದ ವಿಶ್ವರೂಪಂ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳಷ್ಟು ಮತಾಂತರಗಳು ನಡೆದಿವೆ. ನಮ್ಮ ಮನೆ ಪಕ್ಕ, ಗ್ರಾಮ, ಊರುಗಳಲ್ಲಿ ಘರ್ ವಾಪಸಿ ಮಾಡಬೇಕು. ಈ ದೇಶದಲ್ಲಿ ರಾಮ ಮಂದಿರವನ್ನು ಸ್ಥಾಪನೆ ಮಾಡಿದ್ದೇವೆ. ಕಾಶ್ಮೀರದ 370 ಕಾಯ್ದೆಯನ್ನು ತೆಗೆದು ಹಾಕಿದ್ದೇವೆ. ಹಿಂದೂ ಸಂಸ್ಕೃತಿ, ಸಮಾಜ, ಪರಂಪರೆ ಉಳಿಬೇಕಾದರೇ ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಜೊತೆಗೆ ಚೀನಾ, ಜಪಾನಿಗೆ ಹೋಗಿ ಮತಾಂತರಗೊಂಡವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಘರ್ ವಾಪಸಿ ಆದ್ಯ ಕರ್ತವ್ಯದ ರೀತಿಯಲ್ಲಿ ನಾವು ಮಾಡಬೇಕಾಗಿದೆ. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವೂ ಇದೆ. ಮಠ, ದೇವಸ್ಥಾನ ಇದರ ಮುಂದಾಳತ್ವ ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಸಂಬಂಧ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಹಿಂದೂ ಧರ್ಮದ ಪುನರುತ್ಥಾನವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ.ಈ ದೇಶದಲ್ಲಿರುವ ಕ್ರಿಶ್ಚಿಯನ್ನರು, ಮುಸ್ಲಿಮರು ಯಾರು?. ಕೆಲವೇ ವರ್ಷಗಳ ಹಿಂದೆ ಇವರೆಲ್ಲ ಹಿಂದೂಗಳೇ ಆಗಿರಲಿಲ್ಲವೇ..? ಹಿಂದೂ ಧರ್ಮ, ದೇವಸ್ಥಾನ, ಆಚರಣೆಗಳ ಮೇಲೆ ಬೆಂಕಿ ಕಾರುವವರು ಒಂದು ಕಾಲದಲ್ಲಿ ಹಿಂದುಗಳೇ ಆಗಿದ್ದರು. ಭಾರತದ ಮುಸಲ್ಮಾನರು ಯಾರು?. ಇವರೇನು ಅರಬ್, ಸಿರಿಯಾ, ಟರ್ಕಿಯಿಂದ ಬಂದವರೇ? ಇವರೆಲ್ಲಾ ಹೆದರಿಕೆ, ಬೆದರಿಕೆಗೆ ಒಳಗಾಗಿ ಮತಾಂತರಕ್ಕೊಳಗಾದವರು ಎಂದು ಪ್ರತಿಪಾದಿಸಿದರು.
‘ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕು’:
ಸಂವಿಧಾನದ ಆರಂಭದಲ್ಲಿ ದೇಶಕ್ಕೆ ‘ಭಾರತ್’ ಶಬ್ದ ಬಳಸಿದ್ದಾರೆ. 1947ರಲ್ಲಿ ಈ ದೇಶ ಹುಟ್ಟಿದ್ದಲ್ಲ. ಸಾವಿರಾರು ವರ್ಷಗಳಿಂದ ಅವಿಚ್ಛಿನ್ನವಾಗಿ ಬದುಕಿರುವ ಹಿಂದೂ ದೇಶವಿದು. ಸಂವಿಧಾನದ ರಚನಾಕಾರರು ಕೂಡಾ ಈ ವಿಚಾರವನ್ನು ಗೌರವಿಸಿದ್ದಾರೆ. ಭಾರತ ಭಾರತವಾಗಿ ಉಳಿಯಬೇಕೆಂದರೆ ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕು. ಹಿಂದೂಗಳು ಬಹುಸಂಖ್ಯಾತರಾಗಿದ್ದರೆ ಮಾತ್ರ ಸಂವಿಧಾನಕ್ಕೆ ಗೌರವ ಸಿಗುತ್ತದೆ. ಈ ಕಾರಣಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೂ ಮತ್ತು ಹಿಂದುತ್ವ ಬೇರೆಯೇ ಎಂಬ ವ್ಯಾಖ್ಯಾನ ಕೊಡುತ್ತಿದ್ದಾರೆ. ನಾನು ಹಿಂದೂ, ಮೋದಿ ಹಿಂದುತ್ವವಾದಿ ಎನ್ನುತ್ತಿದ್ದಾರೆ. ದೇಶದಲ್ಲಿ ಹಿಂದೂಗಳನ್ನು ಬಕರಾ ಮಾಡುವ ಹೊಸ ಸಿದ್ಧಾಂತ ಮಂಡಿಸಲಾಗುತ್ತಿದೆ. ರಾಹುಲ್ ಗಾಂಧಿಗೆ ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಪೂಜಾ ಪಾಠದ ಮಟ್ಟದಲ್ಲಿ ಇದ್ದರೆ ನಾನು ಹಿಂದೂ, ಹಿಂದೂ ಧರ್ಮದ ರಕ್ಷಣೆಗೆ ಖಡ್ಗ ಎತ್ತಿದರೆ ಅದು ಹಿಂದುತ್ವ ಎಂದು ಟಾಂಗ್ ನೀಡಿದರು.
ಬಲವಂತವಾಗಿ ಲಕ್ಷಾಂತರ ಜನರ ಮತಾಂತರಗೊಳಿಸಿದ ಟಿಪ್ಪು ಮಾದರಿಯಾಗಲು ಹೇಗೆ ಸಾಧ್ಯ?. ಔರಂಗಜೇಬ್ ಈ ದೇಶದ ಹೀರೋ ಆಗಲು ಹೇಗೆ ಸಾಧ್ಯ?. ಪ್ರಗತಿಪರರು ಇಸ್ಲಾಂ ಧರ್ಮವನ್ನು ಎಂದೂ ಪ್ರಶ್ನಿಸುವುದಿಲ್ಲ ಯಾಕೆ?. ದೇಶದಲ್ಲಿ 2015ರ ನಂತರ ಸಾರ್ವಜನಿಕ ಸ್ಥಳದಲ್ಲಿ ಧೈರ್ಯದಿಂದ ಮಾತನಾಡುವ ಶಕ್ತಿ ನಮಗೆ ಸಿಕ್ಕಿದೆ ಎಂದು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ