ಕರ್ನಾಟಕದಲ್ಲಿ ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿ; ರಾತ್ರಿ 10 ಗಂಟೆಯೊಳಗೆ ಎಲ್ಲವೂ ಬಂದ್, ಕೆಲವರಿಗಿದೆ ರಿಯಾಯ್ತಿ..

ಬೆಂಗಳೂರು: ಇಂದಿನಿಂದ (ಡಿಸೆಂಬರ್ 28ರಿಂದ) ರಾತ್ರಿ 10 ಗಂಟೆಯಿಂದ ಕರ್ನಾಟಕದಲ್ಲಿ ಕೊರೊನಾ, ಓಮಿಕ್ರಾನ್ ನಿಯಂತ್ರಿಸಲು ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ತಡರಾತ್ರಿ ವರೆಗೂ ಆರಾಮವಾಗಿ ಓಡಾಡಿಕೊಂಡಿದ್ದವರು ಇಂದಿನಿಂದ ಹತ್ತು ದಿನ ರಾತ್ರಿ 10 ಗಂಟೆಯೊಳಗೆ ಮನೆ ಸೇರಿಕೊಳ್ಳಬೇಕಿದೆ. ವ್ಯಾಪಾರ-ವಹಿವಾಟು ಎಲ್ಲವೂ ರಾತ್ರಿ 10 ಗಂಟೆಯೊಳಗೆ ಬಂದ್ ಆಗಲಿದೆ.
ಓಮಿಕ್ರಾನ್ ಸೋಂಕಿನ ಹಿನ್ನೆಲೆಯಲ್ಲಿ ಅದು ಹೆಚ್ಚಳವಾಗದಂತೆ ತಡೆಯಲು ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಮೊರೆ ಹೋಗಿದೆ. ಇಂದು ರಾತ್ರಿ 10 ಗಂಟೆಯಿಂದಲೇ ರಾಜ್ಯದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗುತ್ತಿದೆ. ಬಾರ್, ಪಬ್, ಹೋಟೆಲ್, ಸಿನಿಮಾ, ಮಾಲ್ ಸೇರಿದಂತೆ ಎಲ್ಲವೂ ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ಸ್ತಬ್ದವಾಗಲಿದೆ.
ಹೇಗಿರಲಿದೆ ಕರ್ಫ್ಯೂ?
ಇಂದಿನಿಂದ ಹತ್ತು ದಿನಗಳ ಕಾಲ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆ ವರೆಗೂ ನೈಟ್‌ಕರ್ಫ್ಯೂ ಇರುವುದರಿಂದ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿವೆ. 10 ಗಂಟೆ ಒಳಗೆ ಹೋಟೆಲ್, ಬಾರ್, ರೆಸ್ಟೋರೆಂಟ್, ಮಾಲ್, ಥಿಯೇಟರ್, ಶಾಪ್, ಕಚೇರಿಗಳು ಲಾಕ್‌, ವ್ಯಾಪಾರ-ವಹಿವಾಟುಗಳು ಬಂದ್‌ ಆಗಲಿದೆ. ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡುವಂತಿಲ್ಲ. ರಾತ್ರಿ 10 ರಿಂದ ಮೆಟ್ರೋ ರೈಲು ಸಂಚಾರದಲ್ಲಿಯೂ ಕಡಿತಗೊಳಿಸಲಾಗಿದೆ.
ಬೆಂಗಳೂರು ಸೇರಿ ರಾಜ್ಯಾದ್ಯಂತ ನಾಕಾಬಂದಿ ಹಾಕಿ, ಪ್ರಮುಖ ರಸ್ತೆಗಳಲ್ಲಿ ಹದ್ದಿನ ಕಣ್ಣಿಡಲಿದೆ. ಸುಮ್ಮನೇ ಓಡಾಡಿದರೆ ಕೇಸ್ ಬೀಳಲಿದೆ. ಆಸ್ಪತ್ರೆಗೆ ಹೋಗುವವರು, ರಾತ್ರಿ ಪಾಳಿ ಕೆಲಸಕ್ಕೆ ಹೋಗುವವರು ಸೂಕ್ತ ದಾಖಲೆ ತೋರಿಸಬೇಕು.

ಪ್ರಮುಖ ಸುದ್ದಿ :-   ನಾಳೆ (ಮೇ 9) ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಪ್ರಕಟ ; ಫಲಿತಾಂಶ ಎಲ್ಲಿ ನೋಡುವುದು..? ಇಲ್ಲಿದೆ ಮಾಹಿತಿ

ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಯಾವುಕ್ಕೆ ಅನುಮತಿ ಇದೆ? ಯಾವುದಕ್ಕೆ ಇಲ್ಲ.?…

* ನೈಟ್ ಕರ್ಫ್ಯೂ ಸಂದರ್ಭದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆ ವರೆಗೆ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ

* ಈ ಸಮಯದಲ್ಲಿ ಕೇವಲ ತುರ್ತು ಸಂದರ್ಭದಲ್ಲಿ ಮಾತ್ರವೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

* ನೈಟ್ ಕರ್ಫ್ಯೂ ವೇಳೆ ಎಲ್ಲಾ ಕೈಗಾರಿಕೆಗಳಿಗೆ ರಾತ್ರಿ ವೇಳೆಯಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ನೌಕರರು ಗುರುತಿನ ಕಾರ್ಡ್ ತೋರಿಸಿ ಸಂಚರಿಸಲು ಅವಕಾಶ ನೀಡಲಾಗಿದೆ.

* ಅಗತ್ಯ ಸೇವೆ ಒದಗಿಸುವ ಸಿಬ್ಬಂದಿ ಓಡಾಟಕ್ಕೆ ನೈಟ್ ಕರ್ಫ್ಯೂ ವೇಳೆ ಅನುಮತಿ ನೀಡಲಾಗಿದೆ.

* ಟೆಲಿಕಾಂ, ಇಂಟರ್ನೆಟ್ ಸರ್ವೀಸ್‌ ನೀಡುವವರ ಓಡಾಟಕ್ಕೂ ಅವಕಾಶ ನೀಡಲಾಗಿದೆ.

*ಔಷಧ ಅಂಗಡಿಗಳು ಈ ಸಂದರ್ಭದಲ್ಲಿ ತೆರೆದಿರುತ್ತದೆ.

*ಈ ವೇಳೆ ಯಾವುದೇ ವಾಣಿಜ್ಯ ಅಂಗಡಿಗಳು-ಮಳಿಗೆಗಳನ್ನು ತೆರೆಯಲು ಅವಕಾಶವಿಲ್ಲ

* ಮನೆ ಡಿಲಿವರಿ ಆಹಾರ ಸರಬರಾಜಿಗೆ ನೈಟ್ ಕರ್ಫ್ಯೂ ಸಂದರ್ಭದಲ್ಲಿ ಅವಕಾಶ

* ಗೂಡ್ಸ್ ವೆಹಿಕಲ್, ಟ್ರಕ್, ಗೂಡ್ಸ್ ಕ್ಯಾರಿಯರ್, ಖಾಲಿ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ

* ರಾತ್ರಿ ಸಂದರ್ಭದಲ್ಲಿ ಬಸ್, ರೈಲು, ಮೆಟ್ರೋ ರೈಲ್ ಹಾಗೂ ವಿಮಾನ ಪ್ರಯಾಣಿಕರಿಗೆ ಅವಕಾಶ. ಇದಕ್ಕೆ ಬಳಸುವ ಟ್ಯಾಕ್ಸಿ, ಬಸ್, ಆಟೋ ಸಂಚಾರಕ್ಕೆ ಅವಕಾಶ

* ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂಗೆ ಮಾತ್ರವೇ ಅವಕಾಶ

ನಿಮ್ಮ ಕಾಮೆಂಟ್ ಬರೆಯಿರಿ

advertisement