ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆರಂಭ: ಪಕ್ಷ ಸಂಘಟನೆ, ಜಿಪಂ, ತಾಪಂ ಚುನಾವಣೆಗಳ ಬಗ್ಗೆಯೂ ಚರ್ಚೆ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದು ೬ ತಿಂಗಳು ಪೂರೈಸುತ್ತಿರುವಾಗಲೇ ಹುಬ್ಬಳ್ಳಿಯಲ್ಲಿ ಇಂದಿನಿಂದ (ಡಿಸೆಂಬರ್‌ ೨೮ರಿಂದ) ಆರಂಭವಾಗಿರುವ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷ ಸಂಘಟನೆ, ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ ಚುನಾವಣೆಯ ಸಿದ್ಧತೆ, ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಪರಾಮರ್ಶೆ, ವಿಧಾನಸಭಾ ಉಪಚುನಾವಣೆ ಸೋಲು ಇವೆಲ್ಲದರ ಬಗ್ಗೆಯೂ ಸಮಗ್ರ ಚರ್ಚೆ ನಡೆಯಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ನೇತೃತ್ವದಲ್ಲಿ ಈ ಕಾರ್ಯಕಾರಿಣಿ ನಡೆದಿದ್ದು, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ್ ಕಟೀಲು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ರಾಜ್ಯದ ಎಲ್ಲ ಸಚಿವರು, ಶಾಸಕರು ಪಾಲ್ಗೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ಆದ ತಾಂತ್ರಿಕ ದೋಷದಿಂದ ಅವರು ತಡವಾಗಿ ಹುಬ್ಬಳ್ಳಿಗೆ ಆಗಮಿಸಿದ್ದರಿಂದ ಕಾರ್ಯಕಾರಿಣಿಯ ಆರಂಭ ಸ್ವಲ್ಪ ವಿಳಂಬವಾಯಿತು.
ಎರಡು ದಿನಗಳ ಕಾರ್ಯಕಾರಿಣಿ ಸಂದರ್ಭದಲ್ಲೇ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ಸಹ ಇಂದು, ಮಂಗಳವಾರ ನಡೆಯಲಿದ್ದು, ಪಕ್ಷ ಸಂಘಟನೆ, ಮುಂಬರುವ ಚುನಾವಣೆಗಳ ತಯಾರಿ, ಚುನಾವಣೆಯ ಫಲಿತಾಂಶಗಳ ವಿಶ್ಲೇಷಣೆ ಎಲ್ಲದರ ಬಗ್ಗೆಯೂ ಚಿಂತನ-ಮಂಥನ ನಡೆಯಲಿದೆ.
ನಾಯಕತ್ವ ಬದಲಾವಣೆಯ ಊಹಾಪೋಹದ ಮಧ್ಯಯೇ ಕಾರ್ಯಕಾರಿಣಿ ನಡೆದಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಅರುಣ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಒತ್ತಾಯವು ಸಭೆಯಲ್ಲಿ ಆಗಿದ್ದು, ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement