ಅತ್ಯಾಚಾರ ಆರೋಪ ಪ್ರಕರಣ: ರಾಘವೇಶ್ವರ ಶ್ರೀಗಳ ಖುಲಾಸೆ ಪ್ರಶ್ನಿಸಿದ್ದ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಜಾ

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಆರೋಪದಿಂದ ಮುಕ್ತಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.
ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ (ಸಿಐಡಿ ತನಿಖಾಧಿಕಾರಿ) ಮತ್ತು ಗಾಯಕಿ ಪ್ರೇಮಲತಾ ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ವಿ.ಶ್ರಿಷಾನಂದ ಬುಧವಾರ ಪ್ರಕಟಿಸಿದರು.
ಅಧೀನ ನ್ಯಾಯಾಲಯದ ಆದೇಶವು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲ ಎಂದು ಆದೇಶಿಸಿದರು. ತನ್ಮೂಲಕ ಇದರೊಂದಿಗೆ ಅತ್ಯಾಚಾರ ಆರೋಪದ ವಿರುದ್ಧ ರಾಘವೇಶ್ವರ ಭಾರತಿ ಸ್ವಾಮೀಜಿ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ದೊಡ್ಡ ಗೆಲುವು ಸಿಕ್ಕಿದಂತಾಗಿದೆ.
ಸಿಐಡಿ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು ಅವಕಾಶವಿಲ್ಲ ಎಂಬ ಕಾರಣಕ್ಕೆ ರಾಘವೇಶ್ವರ ಶ್ರೀಗಳ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗಿದೆ. ಬ
ಸಿಐಡಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಲು ಸರ್ಕಾರ ಈ ಬಗ್ಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಸಿಐಡಿ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು ಅವಕಾಶವಿಲ್ಲ ಎಂಬ ಕಾರಣಕ್ಕೆ ರಾಘವೇಶ್ವರ ಶ್ರೀಗಳ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರ್ಕಾರ ಮತ್ತು ಪ್ರೇಮಲತಾ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ 2014ರ ಆ.17ರಂದು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು  ಆರೋಪಿಸಿ ರಾಮಕಥಾ ಗಾಯಕಿಯಾಗಿದ್ದ ಪ್ರೇಮಲತಾ ಗಿರಿನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ನಗರದ ನ್ಯಾಯಾಲಯಕ್ಕೆ ರಾಘವೇಶ್ವರ ಭಾರತಿ ಮತ್ತು ಇತರರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ 54ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಕೈಬಿಟ್ಟು 2016ರ ಮಾ.31ರಂದು ಆದೇಶಿಸಿತ್ತು. ಅತ್ಯಾಚಾರ ಆರೋಪ ಸಾಬೀತುಪಡಿಸಲು ಯಾವುದೇ ಸೂಕ್ತ ಸಾಕ್ಷಾಧಾರಗಳಿಲ್ಲ. ತನಿಖಾಧಿಕಾರಿಗಳು ಒದಗಿಸಿರುವ ಸಾಕ್ಷ್ಯಗಳಿಂದ ಆರೋಪ ಹೊರಿಸುವುದಾಗಲಿ ಅಥವಾ ಸಾಕ್ಷ್ಯ ವಿಚಾರಣೆ ನಡೆಸುವುದಕ್ಕಾಗಲೀ ಸಾಧ್ಯವಾಗುವುದಿಲ್ಲ. ಆರೋಪ ಕೈಬಿಡಲು ಅರ್ಹ ಪ್ರಕರಣ. ಹಾಗಾಗಿ ಆರೋಪದಿಂದ ಮುಕ್ತಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸಿಐಡಿ ಮತ್ತು ದೂರುದಾರರು ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್​ಗೆ ಸಲ್ಲಿಸಿದ್ದರು. ಈಗ ಹೈಕೋರ್ಟ್‌ ಆರೋಪದಿಂದ ಮುಕ್ತಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

 

 

4.8 / 5. 4

ನಿಮ್ಮ ಕಾಮೆಂಟ್ ಬರೆಯಿರಿ

advertisement