ವಿಜಯಪುರದ ಆರು ಪಟ್ಟಣ ಪಂಚಾಯತ: ಕಾಂಗ್ರೆಸ್ ಮೇಲುಗೈ, ಬಿಜೆಪಿ ಕಳಪೆ ಪ್ರದರ್ಶನ

ವಿಜಯಪುರ : ವಿಜಯಪುರ ಜಿಲ್ಲೆಯ 6 ಪಟ್ಟಣ ಪಂಚಾಯತಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಮೂರು ಕಡೆಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ್ದರೆ, ಒಂದು ಕಡೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ ಹಾಗೂ ಎರಡು ಕಡೆ ಅತಂತ್ರ ಸ್ಥಿತಿಯ ಫಲಿತಾಂಶ ಬಂದಿದೆ.
99 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ 34 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದೆ. 5 ವಾರ್ಡ್‍ಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದು, ಕೊಲ್ಹಾರ ಪಟ್ಟಣ ಪಂಚಾಯತ್ 2 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಒವೈಸಿಯ ಎಐಎಂಐಎಂ ಇದೇ ಮೊದಲ ಬಾರಿಗೆ ಖಾತೆ ತೆರೆದಿದೆ.
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಮೂರು ಪಟ್ಟಣ ಪಂಚಾಯತಗಳಲ್ಲಿ ನಿಡಗುಂದಿಯಲ್ಲಿ 16 ಸ್ಥಾನಗಲ್ಲಿ 9 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದು ಬಹುಮತ ಪಡೆದಿದೆ. ಕೊಲ್ಹಾರ ಪಟ್ಟಣ ಪಂಚಾಯತದ 17 ಸ್ಥಾನಗಳಲ್ಲಿ 11 ಸ್ಥಾನ ಗೆಲ್ಲುವ ಮೂಲಕ ನಿಚ್ಚಳ ಬಹುಮತ ಪಡೆದಿದೆ.
ಮುದ್ದೇಬಿಹಾಳ ತಾಲೂಕ ನಾಲತವಾಡ ಪಟ್ಟಣ ಪಂಚಾಯತದಲ್ಲಿ 14 ಸ್ಥಾನಗಳಲ್ಲಿ ಕಾಂಗ್ರೆಸ್ 9 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಇಲ್ಲಿ ನಾಲ್ವರು ಪಕ್ಷೇತರರು, ಓರ್ವ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಈ ಕ್ಷೇತ್ರದಲ್ಲಿ ಬಿಜೆಪಿ ಖಾತೆಯನ್ನೇ ತೆರೆಯದೆ ಶೂನ್ಯ ಸಂಪಾದನೆ ಮಾಡಿದೆ.
16 ಸ್ಥಾನಗಳಿರುವ ಮನಗೂಳಿ ಪಟ್ಟಣ ಪಂಚಾಯತದಲ್ಲಿ 12 ಸ್ಥಾನಗಳಿಸಿದ ಬಿಜೆಪಿ ಬಹುಮತ ಪಡೆದಿದೆ, ಕಾಂಗ್ರೆಸ್ 4 ಸ್ಥಾನಕ್ಕೆ ತೃಪ್ತಿಪಟ್ಟಿದೆ.
ದೇವರಹಿಪ್ಪರಗಿ ಪಟ್ಟಣ ಪಂಚಾಯತದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 17 ಸದಸ್ಯ ಬಲದ ಈ ಪಂಚಾಯತದಲ್ಲಿ 7 ಸ್ಥಾನ ಕಾಂಗ್ರೆಸ್ ಗೆದ್ದಿದೆ. 4 ಸ್ಥಾನ ಗೆದ್ದಿರುವ ಜೆಡಿಎಸ್, ಮೂರರಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
19 ಸ್ಥಾನಗಳಿರುವ ಆಲಮೇಲ ಪಟ್ಟಣ ಪಂಚಾಯತದಲ್ಲಿ ಬಿಜೆಪಿ 9, ಕಾಂಗ್ರೆಸ್ 7 ಹಾಗೂ ಮೂವರು ಪಕ್ಷೇತರರು ಜಯಗಳಿಸಿದ್ದಾರೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದಕಾರಣ ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement