ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ: ನಾಳೆ ಕರ್ನಾಟಕ ಬಂದ್‌ ಇಲ್ಲ

ಬೆಂಗಳೂರು: ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈಗ ಬಂದ್ ಕರೆಯನ್ನು ಹಿಂಪಡೆದಿದ್ದಾರೆ.
ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡುವಂತೆ ಒತ್ತಾಯಿಸಿ ನಾಳೆ, ಡಿಸೆಂಬರ್ 31ರಂದು ಅವರು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ವಾಟಾಳ್ ನಾಗರಾಜ್ ಬಂದ್ ವಾಪಸ್ ಪಡೆದುಕೊಂಡಿದ್ದಾರೆ.
ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕರ್ನಾಟಕ ಬಂದ್​ ಹಿಂಪಡೆಯಬೇಕೆಂದು ಹಲವು ರಾಜಕೀಯ ನಾಯಕರು ಮನವಿ ಮಾಡಿದರೂ ವಾಟಾಳ್ ನಾಗರಾಜ್ ಬಂದ್​ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಆದರೆ, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಮಾಡಿ ಜನರಿಗೆ ತೊಂದರೆಯಾಗುವುದರಿಂದ ಕರ್ನಾಟಕ ಬಂದ್​ ಹಿಂಪಡೆಯಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ತಮ್ಮ ಕಚೇರಿಗೆ ಬಂದು ಭೇಟಿ ನೀಡುವಂತೆಯೂ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿರುವ ವಾಟಾಳ್ ನಾಗರಾಜ್ ಕರ್ನಾಟಕ ಬಂದ್​ ಹಿಂಪಡೆಯುವುದಾಗಿ ಪ್ರಕಟಿಸಿದ್ದಾರೆ. ವಾಟಾಳ್ ನಾಗರಾಜ್ ಅವರನ್ನು ಮನವೊಲಿಸುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿರುವ ವಾಟಾಳ್​ ನಾಗರಾಜ್​, ಡಿಸೆಂಬರ್ 31ರ ಕರ್ನಾಟಕ ಬಂದ್​ ಮುಂದೂಡಲು ನಿರ್ಧಾರ ಮಾಡಲಾಗಿದೆ. ಎಂಇಎಸ್​ ಸಂಘಟನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ ಹಿನ್ನೆಲೆ ಬಂದ್​ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಯವರು ಎರಡು ಬಾರಿ ಮನವಿ ಮಾಡಿ ನಮ್ಮನ್ನು ಕರೆಸಿದ್ದರು. ಕಾನೂನು ಪ್ರಕಾರ ಎಂಇಎಸ್ ನಿಷೇಧಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು, ನಾವು ಈ ತೀರ್ಮಾನ ತೆಗೆದುಕೊಂಡೆವು ಎಂದು ತಿಳಿಸಿದ್ದಾರೆ.
ಕನ್ನಡ ನಾಡು ನುಡಿ ಹಾಗೂ ಬಾವುಟಕ್ಕೆ ಅನ್ಯಾಯ ಆಗಿದೆ, ಬೆಂಕಿ ಇಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಬಸವಣ್ಣನಿಗೆ ಅವಮಾನವಾಗಿದೆ ಎಂದು ನಾವು ಬಂದ್ ಮಾಡಲು ನಿರ್ಧಾರ ಮಾಡಿದ್ದೆವು. ಯಾರ ವಿರುದ್ಧವೂ ಅಲ್ಲ. ಮುಖ್ಯಮಂತ್ರಿಗಳು ನಾವು ನಿಮ್ಮ ಜೊತೆ ಇದ್ದೇವೆ, ಬಂದ್ ಮಾಡಬೇಡಿ’ ಎಂದು ಹೇಳಿದರು. ಇವತ್ತು ಬೆಳಿಗ್ಗೆಯಿಂದಲೂ ನಮ್ಮ ಒಕ್ಕೂಟದವರು ಬಂದ್ ಬೇಡ ಎಂದು ಮನವಿ ಮಾಡಿದ್ದರು. ಅವರ ಮಾತಿಗೂ ಬೆಲೆ ಕೊಡಬೇಕಾಯಿತು, ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಕೊಡಬೇಕಾಯಿತು. ಹೀಗಾಗಿ ನಾಳೆ ನಡೆಯಬೇಕಾದ ಬಂದ್ ನಡೆಯುವುದಿಲ್ಲ. ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ಬಂದ್ ಹಿಂದೆ ಪಡೆದಿದ್ದೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ಪೆನ್ ಡ್ರೈವ್ ಪ್ರಕರಣ : ಡಿಕೆ ಶಿವಕುಮಾರ ವಿರುದ್ಧ ಪೋಸ್ಟರ್‌ ಸಮರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement