ರಾತ್ರಿ ಕರ್ಫ್ಯೂ ನಡುವೆಯೂ ಡಿಸೆಂಬರ್ 31 ರಂದು ಮದ್ಯ ಮಾರಾಟ ಕಳೆದ ವರ್ಷಕ್ಕಿಂತಲೂ ಹೆಚ್ಚು..!

ಬೆಂಗಳೂರು: ನೈಟ್ ಕರ್ಫ್ಯೂ ಜಾರಿ, ಪೊಲೀಸರ ವಿಶೇಷ ನಿಗಾದ ನಡುವೆಯೂ ಮದ್ಯ ಮಾರಾಟದಲ್ಲಿ ಗ್ರಾಹಕರು ಕಳೆದ ಹೊಸ ವರ್ಷದ ದಾಖಲೆ ಮುರಿದಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮದ್ಯ ಬಾಕ್ಸ್ ಮಾರಾಟ ಹಾಗೂ ಆದಾಯ ಸಂಗ್ರಹದಲ್ಲಿ ಸಾಕಷ್ಟು ವೃದ್ಧಿ ಕಂಡು ಬಂದಿದೆ.
ಕಳೆದ ವರ್ಷ ಡಿಸೆಂಬರ್ 31 ರಂದು 2.25 ಲಕ್ಷ ಕಾರ್ಟನ್ ಬಾಕ್ಸ್‌ಗಳಲ್ಲಿ ಭಾರತೀಯ ನಿರ್ಮಿತ ಮದ್ಯ ಮಾರಾಟವಾಗಿದ್ದರೆ, ಈ ಬಾರಿ ಅದು 2.39 ಲಕ್ಷಕ್ಕೆ ಏರಿದೆ. ಮೂರು ವರ್ಷಗಳ ಹಿನ್ನೆಲೆ ಗಮನಿಸಿದಾಗ ನಿನ್ನೆಯ ಮಾರಾಟ ಕಡಿಮೆಯಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ.
2019ರಲ್ಲಿ ಡಿಸೆಂಬರ್ 31ರಂದು 3.62 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಅದಕ್ಕಿಂತ ಹಿಂದಿನ ವರ್ಷ 3.82 ಲಕ್ಷ ಬಾಕ್ಸ್‌ಗಳು ಮಾರಾಟವಾಗಿದೆ. 2020ರಲ್ಲಿ ಕಡಿಮೆ ಮದ್ಯ ಮಾರಾಟವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಸಲ ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮುಂಚಿತವಾಗಿಯೇ ಮದ್ಯವನ್ನು ಖರೀದಿಸಿಟ್ಟುಕೊಂಡಿದ್ದರು. ಪಬ್​​ಗಳಲ್ಲಿ ತಡರಾತ್ರಿಯವರೆಗೂ ಮದ್ಯಸೇವನೆ ಕಂಡು ಬಂದಿಲ್ಲ. ಆದರೆ, ಇಲ್ಲಿ ಬರಬೇಕಿದ್ದ ಜನ ಬೇರೆ ಪರ್ಯಾಯ ಸ್ಥಳವನ್ನು ಹುಡುಕಿಕೊಂಡಿದ್ದಾರೆ ಹೊರತು ಮದ್ಯಪಾನವ ನಿಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳು ಅಂಕಿ-ಅಂಶ ಸಮೇತ ದಾಖಲೆ ಒದಗಿಸಿದ್ದಾರೆ. ಡಿಸೆಂಬರ್ 2021ರ ತಿಂಗಳಲ್ಲಿ 17‌.18 ಲಕ್ಷ ಕಾಟನ್ ಬಾಕ್ಸ್ ಮದ್ಯ ಮಾರಾಟವಾಗಿದ್ದರೆ, ಸುಮಾರು 10.13 ಲಕ್ಷ ಕಾಟನ್ ಬಾಕ್ಸ್​​ನಷ್ಟು ಬಿಯರ್​​ ಮಾರಾಟವಾಗಿದೆ. ಸರ್ಕಾರಕ್ಕೆ ಇದರಿಂದ ಹರಿದು ಬಂದಿರುವ ಆದಾಯದ ಮೊತ್ತ 977.37 ಕೋಟಿ ರೂಪಾಯಿಯಾಗಿದೆ. ಅಬಕಾರಿ ಇಲಾಖೆ ಆದಾಯ 639.05 ಕೋಟಿ ರೂಗಳಷ್ಟಾಗಿದೆ. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ಕೊನೆಯ ತಿಂಗಳಲ್ಲಿ ಆದಾಯದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ 844.25 ಕೋಟಿ ರೂ. ವಹಿವಾಟು ನಡೆದಿದ್ದು, ಈ ಬಾರಿ ನೈಟ್‌ ಕರ್ಫ್ಯೂ ಹಾಗೂ ನಿಷೇಧಾಜ್ಞೆ ನಡುವೆಯೂ ಮದ್ಯದ ಮಾರಾಟದಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ. ದಿನದ ಅಂತ್ಯದೊಳಗೆ 165 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆದಿದೆ.
ಅಂಕಿ-ಅಂಶ : 2019ರಂದು 163.61 ಕೋಟಿ ರೂ., 2020ರಲ್ಲಿ 153.53 ಕೋಟಿ ರೂ.ಗಳಷ್ಟು ವಹಿವಾಟು ನಡೆದಿತ್ತು. ರಾಜ್ಯದಲ್ಲಿ ಈ ಬಾರಿ (ಡಿ.31ರಂದು) ದಿನದ ಅಂತ್ಯದೊಳಗೆ 165 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆದಿದೆ. ಡಿಸೆಂಬರ್‌ 24ರಿಂದ 31ರ ವರೆಗೆ ಹೆಚ್ಚು ಮದ್ಯ ಮಾರಾಟವಾಗಿದ್ದು, ಬರೋಬ್ಬರಿ 974.58 ಕೋಟಿ ರೂ.ಗಳಷ್ಟು ಮದ್ಯ ಮಾರಾಟವಾಗಿದೆ. ಡಿ. 31ರಂದು 145ರಿಂದ 165 ಕೋಟಿ ರೂ.ಗಳಷ್ಟುಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.7ರಿಂದ 8ರಷ್ಟುಮಾರಾಟ ಹೆಚ್ಚಾಗಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement