ಬ್ಯಾಂಕ್‌ ಲಾಕರ್‌ನಿಂದ ಪುರಾತನ ಪಚ್ಚೆ ಶಿವಲಿಂಗ’ ವಶಕ್ಕೆ ಪಡೆದ ಪೊಲೀಸರು: ಇದರ ಮೌಲ್ಯ ಅಂದಾಜು ₹500 ಕೋಟಿ..!

ಚೆನ್ನೈ: ತಮಿಳುನಾಡು ವಿಗ್ರಹ ಘಟಕದ ಸಿಐಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ತಂಜಾವೂರಿನ ಬ್ಯಾಂಕ್​​ ಲಾಕರ್​​ನಲ್ಲಿ ಇಡಲಾಗಿದ್ದ ಸಾವಿರ ವರ್ಷಗಳಷ್ಟು ಹಳೆಯದಾದ ಸುಮಾರು 500 ಕೋಟಿ ರೂ.ಗಳ ಮೌಲ್ಯದ ಪಚ್ಚೆ ಶಿವಲಿಂಗವನ್ನು ವಶಕ್ಕೆ ಪಡೆದಿದ್ದಾರೆ.
ತಂಜಾವೂರಿನ ಅರುಳಾನಂದ ಬಡಾವಣೆಯ ವ್ಯಕ್ತಿಯೋರ್ವ ಪುರಾತನ ಕಾಲದ ವಿಗ್ರಹವನ್ನು ಬ್ಯಾಂಕ್​​ನಲ್ಲಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ಡಿಸೆಂಬರ್​ 30ರಂದು ದಾಳಿ ನಡೆಸಿತ್ತು. ಈ ವೇಳೆ ಬ್ಯಾಂಕ್​​ ಲಾಕರ್​​ನಲ್ಲಿ ಪಚ್ಚೆ ಶಿವಲಿಂಗ ಇಟ್ಟಿರುವ ಮಾಹಿತಿ ಲಭ್ಯವಾಗಿದೆ, ನಂತರ ಬ್ಯಾಂಕ್‌ ಲಾಕರ್‌ನಿಂದ ಪಚ್ಚೆ ಶಿವಲಿಂಗವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಡಿಜಿಪಿ ಕೆ. ಜಯಂತ್ ಮುರಳಿ ಮಾಹಿತಿ ನೀಡಿದ್ದಾರೆ.
ಪಚ್ಚೆ ಶಿವಲಿಂಗದ ಮೌಲ್ಯ 500 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಆದರೆ ಇದು ಯಾವ ದೇವಸ್ಥಾನಕ್ಕೆ ಸೇರಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ತನಗೆ ಈ ಬಗ್ಗೆ ಏನೂ ತಿಳಿದಿಲ್ಲ ಮತ್ತು ಅವರ ತಂದೆ ಸಮಿಯಪ್ಪನ್‌ ಪಚ್ಚೆ ಲಿಂಗವನ್ನು ಹಣಕಾಸು ಸಂಸ್ಥೆಯ ಲಾಕರ್‌ನಲ್ಲಿ ಇಟ್ಟಿದ್ದರು ಎಂದು ಮಗ ಅರುಣ ಹೇಳಿದ್ದಾರೆ. ಸಮಿಯಪ್ಪನ್ ಮತ್ತು ಅರುಣ್ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಜಯಂತ್ ಮುರಳಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಪಚ್ಚೆ ಲಿಂಗದ ಒಟ್ಟು ತೂಕ 530 ಗ್ರಾಂ ವಿದ್ದು, 8ಸೆಂ. ಮೀ ಎತ್ತರವಿದೆ ಎಂದು ತಿಳಿದುಬಂದಿದೆ. 2016ರಲ್ಲಿ ನಾಗಪಟ್ಟಣಂ ಜಿಲ್ಲೆಯ ಬ್ರಹ್ಮಪುರೇಶ್ವರ ದೇವಾಲಯದಲ್ಲಿನ ಪಚ್ಚೆ ಶಿವಲಿಂಗ ನಾಪತ್ತೆಯಾಗಿದ್ದು, ಇದರ ಸಾಕ್ಷ್ಯಾಧಾರ ಆಧರಿಸಿ ತನಿಖೆ ನಡೆಸಲಾಗುವುದು ಎಂದಿದ್ದಾರೆ. ತಂಜಾವೂರು ಚೋಳರ ರಾಜಧಾನಿಯಾಗಿದ್ದು, ಸುತ್ತಮುತ್ತಲಿನ ತಿರುವಾರೂರ್​, ವೇದಾರಣ್ಯಂ, ತಿರುಕವಲೈ, ತಿರುಕ್ಕರವಾಸಲ್​​, ನಾಗಪಟ್ಟಣಂನಲ್ಲಿರುವ ಏಳು ಶಿವಾ ದೇವಾಲಯಗಳಲ್ಲಿ ಅಮೂಲ್ಯವಾದ ಪಚ್ಚೆ ಲಿಂಗಗಳು ಈಗಲೂ ಕಂಡು ಬರುತ್ತವೆ.
2009 ರಲ್ಲಿ ಕೇರಳದ ಆಲುವಾದಲ್ಲಿರುವ ಆದಿ ಶಂಕರಾಚಾರ್ಯರ ಜನ್ಮಭೂಮಿಯಲ್ಲಿ ಪಚ್ಚೆ ಶಿವಲಿಂಗದ ವಿಗ್ರಹವು ನಾಪತ್ತೆಯಾಗಿತ್ತು. ಮತ್ತು ಅದು ಎಲ್ಲಿಗೆ ಹೋಯಿತು ಎಂಬುದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಕೇರಳ ಪೊಲೀಸರು ಟೆಂಪಲ್ ಕಳ್ಳತನದ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು, ಆದರೆ ಹಲವಾರು ವಿಭಿನ್ನ ದೇವಾಲಯಗಳ ಕಳ್ಳತನದ ಪ್ರಕರಣಗಳನ್ನು ಭೇದಿಸಿದ ಗಣ್ಯ ಸಿಬ್ಬಂದಿ ಈ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿರಲಿಲ್ಲ. ಈಗ ಹಣಕಾಸು ಸಂಸ್ಥೆಯ ಲಾಕರ್‌ನಿಂದ ವಶಪಡಿಸಿಕೊಂಡಿರುವ ಈ ವಿಗ್ರಹಕ್ಕೂ ಆಲುವಾದಿಂದ ಕಳವು ಮಾಡಿದ ವಿಗ್ರಹಕ್ಕೂ ಸಂಬಂಧವಿದೆಯೇ ಇಲ್ಲವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

 

3.9 / 5. 7

ನಿಮ್ಮ ಕಾಮೆಂಟ್ ಬರೆಯಿರಿ

advertisement