ಇಂದಿನಿಂದ ಕರ್ನಾಟಕದಲ್ಲಿ 15ರಿಂದ 18ವರ್ಷ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭ, 31.75 ಲಕ್ಷ ಮಕ್ಕಳು ಲಸಿಕೆ ಪಡೆಯಲು ಅರ್ಹರು

ಬೆಂಗಳೂರು: ಕರ್ನಾಟಕದಲ್ಲಿ 15ರಿಂದ 18 ವರ್ಷ ವಯೋಮಿತಿಯ ಸುಮಾರು 31.75 ಲಕ್ಷ ಮಕ್ಕಳಿದ್ದಾರೆ. ಇವರೆಲ್ಲ ಕೊರೊನಾ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಮೂಡಲಪಾಳ್ಯದ ಬಿಬಿಎಂಪಿ ಶಾಲೆಯಲ್ಲಿ 15ರಿಂದ 18 ವರ್ಷ ವಯೋಮಿತಿಯ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ವಯಸ್ಸಿನವರಿಗೆ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ಲಭ್ಯವಿದೆ ಎಂದು ಸರ್ಕಾರ ತಿಳಿಸಿದ್ದು, ಮೊದಲ ಡೋಸ್ ಲಸಿಕೆ ಪಡೆದ 28 ದಿನಗಳ ನಂತರ ಇವರಿಗೆ 2ನೇ ಡೋಸ್ ಲಸಿಕೆ ಪಡೆಯಲು ಅರ್ಹತೆ ಬರಲಿದೆ.

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ ಶಾಸಕರು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳು ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದು, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಯೋಜನೆಯಿಂದ ಕೆಲಸ ಮಾಡಲು ಬೇಕಿರುವ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದ್ದು, ಸಿದ್ಧತೆ ಪೂರ್ಣಗೊಂಡಿದೆ.
ಮಕ್ಕಳಿಗೆ ಲಸಿಕೆ ಕೊಡುವ ಅಭಿಯಾನಕ್ಕೆ ಚಾಲನೆ ಸಿಗುವ ಜನೇವರಿ ೩, ಸೋಮವಾರ ಸುಮಾರು 6 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 16 ಲಕ್ಷ ಕೊವ್ಯಾಕ್ಸಿನ್ ಡೋಸ್​ಗಳಿವೆ. ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಲಸಿಕಾ ಅಭಿಯಾನಗಳು ನಡೆಯಲಿವೆ ಎಂದು ಸರ್ಕಾರ ತಿಳಿಸಿದೆ.
ಶಾಲೆಗಳಲ್ಲಿ ಲಸಿಕೆ ತೆಗೆದುಕೊಳ್ಳಲು ಸಾಧ್ಯವಾಗದ ಮಕ್ಕಳು ಸಮೀಪದ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ಕೊಮಾರ್ಬಿಡಿಟಿ ಲಕ್ಷಣಗಳಿರುವ ಮಕ್ಕಳಿಗೆ ಆಸ್ಪತ್ರೆಗಳಲ್ಲಿ ವೈದ್ಯರ ನಿಗಾವಣೆಯಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಆನ್​ಲೈನ್ ಕ್ಲಾಸ್ ಮಾಡುತ್ತಿರುವ ಶಾಲೆಗಳು ಲಸಿಕಾ ಅಭಿಯಾನಕ್ಕಾಗಿ ದಿನ ನಿಗದಿ ಮಾಡಿಕೊಳ್ಳಬಹುದಾಗಿದೆ. ಔಪಚಾರಿಕ ಶಿಕ್ಷಣವನ್ನು ನಿಲ್ಲಿಸಿರುವ ಮಕ್ಕಳ ಸಮೀಪದ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement